Monday, October 6, 2025
Homeರಾಷ್ಟ್ರೀಯ | Nationalಭಾರತದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ

ಭಾರತದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ

Lawyer tries to throw shoe at Chief Justice, he says these things don't affect me

ನವದೆಹಲಿ,ಅ.6- ಭಗವಾನ್‌ ವಿಷ್ಣುವಿನ ಕುರಿತು ಟೀಕೆಗೆ ಗುರಿಯಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಸಂಗ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರು ವಿಚಾರಣೆ ನಡೆಸುತ್ತಿದ್ದರು. ವಾದ, ಪ್ರತಿವಾದ ನಡೆಯುತ್ತಿದ್ದ ವೇಳೆ ನ್ಯಾಯಾಲಯದ ಹಾಲ್‌(ಕೊಠಡಿ)ನಲ್ಲೇ ಇದ್ದ ವಕೀಲರೊಬ್ಬರು ತಮ್ಮ ಶೂ ತೆಗೆದುಕೊಂಡು ನೇರವಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದತ್ತ ಎಸೆದರು.

ಇದನ್ನು ನಿರೀಕ್ಷೆ ಮಾಡದೆ ಗವಾಯಿ ಅವರು ಶೂ ತಮತ್ತ ಬರುತ್ತಿದ್ದನ್ನು ಕಂಡು ತಕ್ಷಣವೇ ಪೀಠದ ಪಕ್ಕಕ್ಕೆ ವಾಲಿದ್ದರಿಂದ ಶೂ ಅವರಿಗೆ ತಾಗದೆ ಮುಂದೆ ಹೋಗಿ ಬಿದ್ದಿತು.
ಈ ಘಟನೆಯಿಂದಾಗಿ ಹಾಲ್‌ನಲ್ಲಿ ಒಂದು ಕ್ಷಣ ಗಲಿಬಿಲಿ ವಾತಾವರಣ ನಿರ್ಮಾಣವಾಯಿತು. ಶೂ ಎಸೆದ ವಕೀಲನನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದು ಹಾಲ್‌ನಿಂದ ಹೊರಗೆ ಎಳೆದೊಯ್ದರು.

ಇದರಿಂದ ವಿಚಲಿತಗೊಳ್ಳದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು, ನಾನು ಇಂತಹ ಘಟನೆಯಿಂದ ವಿಚಲಿತನಾಗುವುದಿಲ್ಲ. ನನ್ನನ್ನು ಅವಮಾನಿಸಿದರೆ ನಾನು ಹೆದರಿ ಕೂರುವುದಿಲ್ಲ. ಸಂವಿಧಾನಬದ್ಧವಾಗಿ ಕಾನೂನು ಎತ್ತಿ ಹಿಡಿಯುತ್ತೇನೆ ಎಂದು ವಿಚಾರಣೆ ಸಂದರ್ಭದಲ್ಲೇ ಹೇಳಿದರು.

ಇದರಿಂದ ವಿಚಲಿತರಾಗಬೇಡಿ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ವಿಚಾರಣೆಯನ್ನು ಮುಂದುವರೆಸಿ ಎಂದು ತಮ ಸಹೋದ್ಯೋಗಿ ನ್ಯಾಯಾಧೀಶರಿಗೆ ಸೂಚಿಸಿದರು. ಹಾಲ್‌ನಿಂದ ವಕೀಲನನ್ನು ಎಳೆದೊಯ್ಯುತ್ತಿದ್ದಾಗ, ಸನಾತನ ಧರ್ಮವನ್ನು ಅವಮಾನಿಸಿದರೆ ಸಹಿಸುವುದಿಲ್ಲ ಎಂದು ಕೂಗಾಡುತ್ತಿದ್ದ ಆತನ ಬಾಯಿಯನ್ನು ಬಲವಂತವಾಗಿ ಮುಚ್ಚಿ ಹೊರಗೆ ಕರೆದೊಯ್ದರು. ಇದೀಗ ವಕೀಲನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಶೂ ಎಸೆದ ವಕೀಲನನ್ನು ರೋಹಿತ್‌ ಪಾಂಡೆ ಎಂದು ಗುರುತಿಸಲಾಗಿದೆ. ಈತ 2011ರಿಂದ ಬಾರ್‌ ಅಸೋಸಿಯೇಷನ್‌ನ ಸದಸ್ಯ ಎನ್ನಲಾಗಿದೆ. ಸನಾತನ ಧರ್ಮದ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಅಗೌರವವಾಗಿ ಮಾತನಾಡಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ. ಅವರ ಮೇಲೆ ಇದ್ದ ನಂಬಿಕೆ ಹೋಗಿದೆ. ನ್ಯಾಯಪೀಠದಲ್ಲಿ ಕುಳಿತು ಒಂದು ಧರ್ಮದ ಬಗ್ಗೆ ಮಾತನಾಡುವುದು ಸರಿಯೇ ಎಂದು ಆತ ಹಾಲ್‌ನಲ್ಲೇ ಕೂಗಾಡಿದ.

ಏನಿದು ವಿವಾದ?: ಮಧ್ಯಪ್ರದೇಶದ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣು ದೇವಸ್ಥಾನವನ್ನು ಪುನರ್‌ ನಿರ್ಮಾಣ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಪೀಠ ವಜಾಗೊಳಿಸಿ, ಇದು ಸಂಪೂರ್ಣವಾಗಿ ಪ್ರಚಾರ ಪಡೆಯುವ ಹಿತಾಸಕ್ತಿಯ ಅರ್ಜಿಯಾಗಿದೆ. ನಿಮಗೆ ಏನಾದರೂ ಬೇಕಾದರೆ ದೇವರನ್ನೇ ಈಗ ಏನಾದರೂ ಕೇಳಿ. ನೀವು ವಿಷ್ಣುವಿನ ಕಟ್ಟಾ ಭಕ್ತರು ಎಂದು ಹೇಳುತ್ತೀರಿ. ಈಗಲೇ ಅಲ್ಲಿಗೆ ಹೋಗಿ ಪ್ರಾರ್ಥಿಸಿರಿ ಎಂದು ಗವಾಯಿ ಹೇಳಿದ್ದರು.

ಮುಖ್ಯ ನ್ಯಾಯಮೂರ್ತಿಗಳ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲವರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದರು. ಆ ಅರ್ಜಿ ವಿಚಾರಣೆ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ. ಇನ್ನು ಪ್ರಕರಣದ ಕುರಿತು ಭದ್ರತಾ ಅಧಿಕಾರಿಗಳು, ಸುಪ್ರೀಂ ಕೋರ್ಟ್‌ ಉಪ ಪೊಲೀಸ್‌‍ ಆಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿ ವಕೀಲನನ್ನು ವಿಚಾರಣೆಗೆ ಒಳಪಡಿಸಲು ಮುಖ್ಯ ಆಯುಕ್ತರಿಗೆ ಮನವಿ ಮಾಡಲಿದ್ದಾರೆ.

RELATED ARTICLES

Latest News