Monday, October 6, 2025
Homeರಾಷ್ಟ್ರೀಯ | Nationalಕಾಂಗ್ರೆಸ್‌ನೊಳಗೆ ಕಿತ್ತಾಟ : ಸಿಡಿದೆದ್ದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ

ಕಾಂಗ್ರೆಸ್‌ನೊಳಗೆ ಕಿತ್ತಾಟ : ಸಿಡಿದೆದ್ದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ

Iqbal Ansari

ಬೆಂಗಳೂರು, ಅ.6- ಕಾಂಗ್ರೆಸ್‌‍ನ ಒಳ ರಾಜ ಕೀಯದ ಬಗ್ಗೆ ಮತ್ತೊಬ್ಬ ಮಸ್ಲಿಂ ಮುಖಂಡ ಸಿಡಿದೆದ್ದು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದ ಮುಖಂಡರ ವಿರುದ್ಧ ಕೆಂಡ ಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದು, ಸುಮಾರು 2 ಸಾವಿರ ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜನರನ್ನು ಸೇರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಗೊಂದಲ ನಿರ್ಮಾಣವಾಗಿದೆ. ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ರೊಚ್ಚಿಗೆದ್ದಿದ್ದು, ನಾನು ಮುಸ್ಲಿಂ ಎಂಬ ಕಾರಣಕ್ಕಾಗಿ ನನ್ನನ್ನು ರಾಜಕೀಯವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನಾನು ಗೆದ್ದರೆ, ಸಚಿವನಾಗುತ್ತೇನೆ ಎಂಬ ಕಾರಣಕ್ಕಾಗಿ ಹುನ್ನಾರ ನಡೆಸಿ ಎಲ್ಲರೂ ಸೇರಿ ಗಣಿ ಮಾಲೀಕ ಜನಾರ್ದನರೆಡ್ಡಿ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. ನನ್ನನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಇಂದು ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಮಾಜಿ ಸಚಿವನಾಗಿದ್ದರೂ, ಮುಸ್ಲಿಂ ಎಂಬ ಕಾರಣಕ್ಕಾಗಿ ನನ್ನನ್ನು ದೂರ ಇಟ್ಟಿದ್ದಾರೆ. ಪಕ್ಷದ ನಾಯಕರೂ ಕೂಡ ಕಡೆಗಣಿಸಿದ್ದಾರೆ ಎಂದು ಆಡಿಯೋ ಸಂದೇಶದಲ್ಲಿ ಇಕ್ಬಾಲ್‌ ಅನ್ಸಾರಿ ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿಯವರ ಪರಮಾಪ್ತ ಬಳಗದಲ್ಲಿರುವ ಹಿಂದುಳಿದ ವರ್ಗಗಳ ಸಚಿವ ಶಿವರಾಜತಂಗಡಗಿ, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಜಶೇಖರ ಇಟ್ನಾಳ್‌, ಶಾಸಕ ರಾಘವೇಂದ್ರ ಇಟ್ನಾಳ್‌ ಸೇರಿದಂತೆ ಜಲ್ಲೆಯ ಕಾಂಗ್ರೆಸ್‌‍ ನಾಯಕರು ಹಾಗೂ ಮುಖಂಡರ ವಿರುದ್ಧ ಇಕ್ಬಾಲ್‌ ಅನ್ಸಾರಿ ಕಿಡಿಕಾರಿದ್ದಾರೆ.

ಈ ಎಲ್ಲರೂ ಸೇರಿ ತನ್ನ ವಿರುದ್ಧ ಮುಖ್ಯಮಂತ್ರಿಯವರಿಗೆ ನಕಾರಾತಕ ಮಾಹಿತಿಗಳನ್ನು ನೀಡುತ್ತಿದ್ದಾರೆ. ಇಂದಿನ ಕಾರ್ಯಕ್ರಮಕ್ಕೆ ಇಕ್ಬಾಲ್‌ ಅನ್ಸಾರಿ ಜನರನ್ನು ಸೇರಿಸಿಲ್ಲ, ಸಂಸದ ರಾಘವೇಂದ್ರ ಇಟ್ನಾಳ್‌ ಅವರೇ ಗಂಗಾವತಿಗೆ ಹೋಗಿ ಜನರನ್ನು ಸಂಘಟಿಸಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಯವರಿಗೆ ತಲುಪಿಸಿದ್ದಾರೆ.ನಾನು ತಮ ಕ್ಷೇತ್ರದಿಂದ 224 ಬಸ್‌‍ಗಳಲ್ಲಿ ಜನರು ಕಾರ್ಯಕ್ರಮಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿದ್ದೇನೆ. ಈ ಎಲ್ಲಾ ಕೆಲಸಗಳನ್ನು ನಾನೇ ಮಾಡಿದ್ದೇನೆಂದು ಸಂಸದ ಹೇಳಿಕೊಳ್ಳುತ್ತಿದ್ದಾನೆ ಎಂದು ಏಕವಚನದಲ್ಲೇ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ.

ಗಂಗಾವತಿಯಲ್ಲಿ ಜನಾರ್ದನರೆಡ್ಡಿಯವರ ಸಮುದಾಯದ ಮತದಾರರ ಸಂಖ್ಯೆ ಕಡಿಮೆ ಇದೆ. ಆದರೂ ಕಾಂಗ್ರೆಸ್‌‍ ಪಕ್ಷದ ನಾಯಕರು ಪರೋಕ್ಷವಾಗಿ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ಒಳ್ಳೆಯ ಕೆಲಸಗಳನ್ನು ತಾವೇ ಮಾಡಿದ್ದಾಗಿ ಹೇಳಿಕೊಳ್ಳುವ ಅವರು, ಪಕ್ಷಕ್ಕೆ ತೊಂದರೆಯಾದಾಗ ಬಚ್ಚಿಟ್ಟುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ವಿರುದ್ಧ ಗುಂಪು ಕಟ್ಟಿಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆ. ಈ ರೀತಿಯ ಹುನ್ನಾರಗಳ ಬಗ್ಗೆ ನಾನು ರಾಜ್ಯದಾದ್ಯಂತ ಮುಸ್ಲಿಂ ಸಮುದಾಯಕ್ಕೆ ವಿವರಿಸುತ್ತೇನೆ. ಕೊಪ್ಪಳ ಜಿಲ್ಲೆ ಕುರಿತಂಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಆ ಗುಂಪಿನವರ ಮಾತುಗಳನ್ನು ಕೇಳಿ, ಏಕಮುಖ ನಿರ್ಧಾರ ಮಾಡಬೇಡಿ, ನನ್ನ ಅಭಿಪ್ರಾಯಗಳನ್ನೂ ಕೇಳಿ ಎಂದು ಮುಖ್ಯಮಂತ್ರಿ ಅವರಿಗೆ ಅನ್ಸಾರಿ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News