ಬೆಂಗಳೂರು,ಅ.6- ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್‌ವೊಂದು ನಿಲ್ದಾಣದಲ್ಲಿನ ನಂದಿನಿ ಪಾರ್ಲರ್‌ಗೆ ನುಗ್ಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ 7.30 ಸುಮಾರಿನಲ್ಲಿ ಚಾಲಕ ಬಿಎಂಟಿಸಿ ನಿಲ್ದಾಣದಿಂದ ಮೆಜೆಸ್ಟಿಕ್ ಕಡೆಗೆ ಹೋಗಲು ಬಸ್‌ನ್ನು ಹೊರಗೆ ತೆಗೆಯುತ್ತಿದ್ದರು.
ಆ ಸಂದರ್ಭದಲ್ಲಿ ಬಸ್‌ನ ಬ್ರೇಕ್ ಫೇಲ್ ಆಗಿ ನಿಯಂತ್ರಣಕ್ಕೆ ಸಿಗದಿದ್ದಾಗ ಗಾಬರಿಗೊಂಡ ಚಾಲಕ ರಸ್ತೆಯಲ್ಲಿ ಜನರು ಇರುವುದು ಗಮನಿಸಿ ತಕ್ಷಣ ಹ್ಯಾಂಡ್ ಬ್ರೇಕ್ ಹಿಡಿದು ತಿರುಗಿಸಿದ್ದಾರೆೆ. ಆದರೆ ಅದೂ ಸಹ ಕೆಲಸ ಮಾಡದೆ ನಂದಿನಿ ಪಾರ್ಲರ್ ಐಸ್‌ಕ್ರೀಮ್ ಅಂಗಡಿಗೆ ನುಗ್ಗಿದೆ.
ಇದರಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದವರು ಆತಂಕಗೊಂಡರು. ಅದೃಷ್ಟವಶಾತ್ ಯಾವುದೇ ಸಾವುನೋವುಗಳಾಗಿಲ್ಲ. ಬಸ್ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಬಗ್ಗೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದು ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ತನಿಖೆ ಆರಂಭಿಸಿದ್ದಾರೆ.