ಬೆಂಗಳೂರು,ಅ.6- ಕುಡಿಯಲು ನೀರು ಕೊಡದ ಪತ್ನಿಗೆ ಲಟ್ಟಣಿಗೆ ಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಚೊಕ್ಕಸಂದ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಪ್ರೀತಿಸಿಂಗ್ (26) ಕೊಲೆಯಾದ ಗೃಹಿಣಿ. ಆರೋಪಿ ಪತಿ ಚೋಟಾಲಾಲ್‌ಸಿಂಗ್ (28) ನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಮೂಲದವರಾದ ಪ್ರೀತಿಸಿಂಗ್ ಹಾಗೂ ಚೋಟಾಲಾಲ್‌ಸಿಂಗ್ ದಂಪತಿ ಚೊಕ್ಕಸಂದ್ರದಲ್ಲಿ ಬಂದು ನೆಲೆಸಿದ್ದರು. ದಂಪತಿಗೆ ಇಬ್ಬರು ಪುಟ್ಟಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಚೋಟಾಲಾಲ್‌ಸಿಂಗ್ ಹಾಗೂ ಪತ್ನಿ ಪ್ರೀತಿಸಿಂಗ್ ಬೇರೆ ಬೇರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸೆ.24 ರಂದು ಕೆಲಸದಿಂದ ಮನೆಗೆ ಬಂದು ಕುಡಿಯಲು ನೀರು ಕೇಳಿದ್ದಾನೆ. ಆ ಸಂದರ್ಭದಲ್ಲಿ ಪತ್ನಿ ಪ್ರೀತಿಸಿಂಗ್ ನೀನೇ ತೆಗೆದುಕೊಂಡು ಕುಡಿ ಎಂದು ಹೇಳಿದ್ದಾರೆ.
ಇದರಿಂದ ಕೋಪಗೊಂಡ ಪತಿ ಕೈಗೆ ಸಿಕ್ಕಿದ ಲಟ್ಟಣಿಗೆ ಯಿಂದ ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 1 ವಾರದ ನಂತರ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪೀಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಚೋಟಾಲಾಲ್‌ಸಿಂಗ್ ನನ್ನು ಬಂಧಿಸಿದ್ದಾರೆ. ಅಪ್ಪ-ಅಮನ ಜಗಳದಲ್ಲಿ ಇಬ್ಬರು ಕಂದಮಗಳು ಅನಾಥವಾಗಿವೆ.ಅಮ ಕೊಲೆಯಾದರೆ ಅಪ್ಪ ಜೈಲಿಗೆ ಹೋಗಿದ್ದಾನೆ. ಹಾಗಾಗಿ ಪ್ರೀತಿಸಿಂಗ್ ಅವರ ತಂದೆ ಈ ಇಬ್ಬರು ಮಕ್ಕಳನ್ನು ಮಧ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.