ಕೊಪ್ಪಳ,ಅ.7-ಪವಿತ್ರ ಪುಣ್ಯ ಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೂಕನಪಳ್ಳಿ ಗ್ರಾಮದ ಬಳಿ ಕಳೆದ ರಾತ್ರಿ ನಡೆದಿದೆ.
ಮೃತರನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ನಿವಾಸಿಗಳಾದ ಅನ್ನಪೂರ್ಣ(40), ಪ್ರಕಾಶ್(25), ಶರಣಪ್ಪ(19) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಳ್ಳಿಹಾಳ ಗ್ರಾಮದಿಂದ ಹಲವರು ಕಾಲ್ನಡಿಗೆಯಲ್ಲಿ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ ದೇವಸ್ಥಾನಕ್ಕೆ ಶನಿವಾರ ಪಾದಯಾತ್ರೆ ಆರಂಭಿಸಿದ್ದರು. ರಾತ್ರಿ ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಈ ಪಾದಯಾತ್ರಿಗಳ ಮೇಲೆ ಹರಿದಿದ್ದರಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಕೇವಲ ಕೇವಲ 3 ಗಂಟೆ ಕಳೆದಿದ್ದರೆ ಇವರು ದೇವಸ್ಥಾನ ತಲುಪುತ್ತಿದ್ದರು. ಆದರೆ ವಿಧಿಯಾಟದಲ್ಲಿ ಮೂವರು ಜೀವ ಕಳೆದುಕೊಂಡಿರುವುದು ದುರ್ದೈವ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ವಾಹನವನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.ಘಟನಾ ಸ್ಥಳಕ್ಕೆ ಎಸ್ಪಿ ಡಾ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.