ಬೆಂಗಳೂರು,ಅ.7- ಜಾರ್ಖಂಡ್ ಮೂಲದ ಇಬ್ಬರು ಗ್ರಾನೈಟ್ ಕಾರ್ಮಿಕರ ನಡುವೆ ಜಗಳವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮು (35) ಕೊಲೆಯಾದ ವ್ಯಕ್ತಿ. ಆರೋಪಿ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರು ಜಾರ್ಖಂಡ್ ನಿವಾಸಿಗಳಾಗಿದ್ದು ಮರಿಯಣ್ಣಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಗ್ರಾನೇಟ್ ಹಾಕುವ ಕೆಲಸ ಮಾಡಿಕೊಂಡು ಅಲ್ಲಿಯ ಲೇಬರ್ ಶೆಡ್ನಲ್ಲಿ ರಾತ್ರಿ ತಂಗುತ್ತಿದ್ದರು.
ರಾತ್ರಿ 12 ಗಂಟೆ ಸುಮಾರಿನಲ್ಲಿ ಮದ್ಯಪಾನ ಸೇವಿಸಿದ್ದ ಇವರಿಬ್ಬರು ಲೇಬರ್ ಶೆಡ್ನಲ್ಲಿ ಯಾವುದೋ ವಿಚಾರಕ್ಕೆ ಜಗಳವಾಡಿದ್ದಾರೆ. ಆ ವೇಳೆ ರಘು ಚಾಕುವಿನಿಂದ ರಾಮುವಿನ ಹೊಟ್ಟೆ ,ಎದೆ ಇನ್ನೀತರ ಭಾಗಗಳಿಗೆ ಮನಬಂದಂತೆ ಇರಿದು ಪರಾರಿಯಾಗಿದ್ದನು.
ಸುದ್ದಿ ತಿಳಿದು ಅಮೃತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಶೋಧ ಕಾರ್ಯ ನಡೆಸಿದಾಗ ಆತ ಜಾರ್ಖಂಡ್ಗೆ ಪರಾರಿಯಾಗಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.