ಬೆಂಗಳೂರು,ಅ.7- ಕಳೆದ ಸೆಪ್ಟಂಬರ್ 22ರಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯಾದ್ಯಂತ ನಡೆಸುತ್ತಿರುವ ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರು ತೊಡಗಿರುವ ಕಾರಣ, ದಸರಾ ರಜೆ ವಿಸ್ತರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪನವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.
ಪ್ರಸ್ತುತ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಆದರೆ, ಶಿಕ್ಷಕರು ಜಾತಿಗಣತಿ ಕಾರ್ಯದಲ್ಲಿ ತೊಡಗಿರುವುದರಿಂದ ಈ ರಜೆಯ ಅವಧಿಯನ್ನು ವಿಸ್ತರಿಸಬೇಕೆಂದು ಸಂಘ ಒತ್ತಾಯಿಸಿದೆ.
ಸೆಪ್ಟಂಬರ್ 22ರಿಂದ ಶಿಕ್ಷಕರು ಜಾತಿಗಣತಿ ಪ್ರಾರಂಭಿಸಿದ್ದಾರೆ. ಸಮೀಕ್ಷೆ ಬೆಂಗಳೂರಿನಲ್ಲಿ ಇನ್ನೂ ಗೊಂದಲದಲ್ಲಿ ನಡೆಯುತ್ತಿದೆ. ಹೀಗಾಗಿ ಶಿಕ್ಷಕರು ದೈಹಿಕ ಬೌದ್ದಿಕವಾಗಿ ಒತ್ತಡದಲ್ಲಿದ್ದಾರೆ. ಅವರಿಗೆ ದೈಹಿಕ ಮಾನಸಿಕ ವಿರಾಮದ ಅವಶ್ಯಕತೆ ಇದೆ. ಹೀಗಾಗಿ ಅಕ್ಟೋಬರ್ 17ರವರೆಗೆ ದಸರಾ ರಜೆ ವಿಸ್ತರಿಸುವಂತೆ ಮನವಿ ಮಾಡಿದೆ.
ಜಾತಿಗಣತಿಯ ಕಾರ್ಯವು ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಹೇರಿದ್ದು, ಇದರಿಂದ ಅವರ ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಶಾಲೆಗಳು ಮಕ್ಕಳಿಗೆ ರಜೆ ಘೋಷಿಸಿದ್ದರೂ, ಶಿಕ್ಷಕರು ಗಣತಿಯ ಕೆಲಸದಲ್ಲಿ ತೊಡಗಿರುವುದರಿಂದ ಅವರಿಗೆ ರಜೆಯ ಲಾಭವು ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಈ ಸಮೀಕ್ಷೆಯು ಇನ್ನೂ ಅಸ್ತವ್ಯಸ್ತವಾಗಿ ನಡೆಯುತ್ತಿದ್ದು, ಶಿಕ್ಷಕರ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ರಜೆಯನ್ನು ವಿಸ್ತರಿಸಿದರೆ ಶಿಕ್ಷಕರಿಗೆ ಕೆಲಸದ ಒತ್ತಡ ತಗ್ಗಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಈ ಮನವಿಯು ಶಿಕ್ಷಕರ ಆರೋಗ್ಯವನ್ನು ಕಾಪಾಡುವ ಜೊತೆಗೆ, ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ. ಒತ್ತಡದಿಂದ ಕೂಡಿದ ಶಿಕ್ಷಕರು ತಮ ಶಿಕ್ಷಣ ಕಾರ್ಯದಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ನೀಡಲು ಸಾಧ್ಯವಾಗುವುದಿಲ್ಲ. ರಜೆಯನ್ನು ವಿಸ್ತರಿಸಿದರೆ ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ. ಈ ಕೋರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಕೋರಿಕೊಂಡಿದೆ.
ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಅವರ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು. ಜಾತಿಗಣತಿ ಮುಂತಾದ ಹೆಚ್ಚುವರಿ ಕಾರ್ಯಗಳು ಶಿಕ್ಷಕರ ಮೇಲೆ ಒತ್ತಡವನ್ನು ಹೆಚ್ಚಿಸಿದೆ, ಹಾಗಾಗಿ ರಜೆಯ ವಿಸ್ತರಣೆಯು ಈ ಸಮಸ್ಯೆಗೆ ಪರಿಹಾರವಾಗಬಹುದು ಎಂದು ಹೇಳಿದೆ.