ಬೆಂಗಳೂರು, ಅ.8– ಬಿಗ್‌ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಮನೋರಂಜನೆ ಹಾಗೂ ಉದ್ಯೋಗದ ಸೃಷ್ಟಿಯ ದೃಷ್ಟಿಯಿಂದ ಬಿಗ್‌ಬಾಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಗ್‌ಬಾಸ್ ಶೋ ಅನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ನನಗೆ ಈ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಾಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು.
ಬಿಗ್‌ಬಾಸ್ ಶೋ ನಡೆಯದಂತೆ ಸಚಿವರು ನಟ್ಟುಬೋಲ್‌್ಟ ಟೈಟ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿರುವುದೆಲ್ಲಾ ರಾಜಕೀಯ ಎಂದರು.
ಕುಮಾರಸ್ವಾಮಿಯಾದರೂ ಟ್ವೀಟ್ ಮಾಡಲಿ ಅಥವಾ ಮೇಲಿನವವರನ್ನಾದರೂ ಕರೆ ತಂದು, ಟೀಕೆ ಮಾಡಿಸಲಿ ನಾನು ಅದಕ್ಕೆ ಹೆದರುವುದಿಲ್ಲ. ನನ್ನನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ನೆಮದಿಯೇ ಇರುವುದಿಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಉದ್ಯೋಗ ಸೃಷ್ಟಿ ಬಹಳ ಮುಖ್ಯ. ಮನೋರಂಜನಾ ಚಟುವಟಿಕೆಗಳು ಮುಂದುವರಿಯಬೇಕು. ಜಾಲಿವುಡ್ ಸ್ಟುಡಿಯೋದವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಗಳನ್ನು ಪಾಲಿಸಲಿ, ತಪ್ಪುಗಳನ್ನು ತಿದ್ದಿಕೊಳ್ಳಲಿ ಎಂದರು.
ಬಿಗ್‌ಬಾಸ್ ಶೋಗೆ ಮತ್ತೊಂದು ಅವಕಾಶ ನೀಡಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ಜೊತೆಯೂ ನಿನ್ನೆ ರಾತ್ರಿ ತಾವು ಚರ್ಚೆ ನಡೆಸಿದ್ದಾಗಿ, ಹೇಳಿದರು.
ಏನೋ ತಪ್ಪುಗಳಾಗಿರುತ್ತವೆ. ಸರಿಪಡಿಸಿಕೊಳ್ಳಲಿ ಖಾಸಗಿ ಸಂಸ್ಥೆಯ ಹೂಡಿಕೆಗಳು ರಾಜ್ಯಕ್ಕೆ ಬೇಕಿದೆ ಎಂದು ಸಮರ್ಥಿಸಿಕೊಂಡರು.ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಬಹಳ ತಪ್ಪು. ಯಾರೇ ಇರಲಿ ನ್ಯಾಯದಾನ ನೀಡುವ ಸ್ಥಾನದಲ್ಲಿ ಕುಳಿತಿದ್ದಾಗ ಅವರನ್ನು ಗೌರವಿಸಬೇಕು. ಅಲ್ಲಿ ಧರ್ಮ ವಿಚಾರ ತಂದು ಅಧರ್ಮ ಮಾಡುವುದು ಅಕ್ಷಮ್ಯ ಎಂದರು.
ನ್ಯಾಯಮೂರ್ತಿಗಳು ಶೂ ಎಸೆದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳದಂತೆ ಹೇಳಿದ್ದರೂ, ಸರ್ಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಮುಂದೆ ಈ ರೀತಿಯಾಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಹಿತಾಸಕ್ತಿಗೆ ಅನುಗುಣವಾಗಿ ಸುರಂಗ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ನಗರದ ಹೃದಯ ಭಾಗದಲ್ಲಿರುವ ಲಾಲ್‌ಬಾಗ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಲಾಲ್‌ಬಾಗ್ ಪಾವಿತ್ರ್ಯ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ನಮಗೂ ಅರಿವಿದೆ. ಮುಂದಿನ ಶನಿವಾರ ಅಥವಾ ಭಾನುವಾರ ಎಲ್ಲಾ ಅಧಿಕಾರಿಗಳ ಜೊತೆ ನಾನೇ ಖುದ್ದಾಗಿ ಲಾಲ್‌ಬಾಗ್‌ಗೆ ಭೇಟಿ ನೀಡಿ, ಯಾವ ಜಾಗದಲ್ಲಿ ಕಾಮಗಾರಿ ನಡೆಯುತ್ತದೆ ಎಂದು ಪರಿಶೀಲಿಸುತ್ತೇನೆ. ಈ ವಿಷಯವಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ವಿವೇಚನಾಧಿಕಾರಕ್ಕೆ ಸೇರಿದೆ. ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.