ಬೆಂಗಳೂರು,ಅ.9- ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ಗಾಂಧಿ ಅವರಂತೆಯೇ ಅಸ್ತವ್ಯಸ್ತವಾಗಿದ್ದು, ಗೊಂದಲಮಯವಾಗಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಸಮೀಕ್ಷೆಯಲ್ಲ. ಇದು ದೋಷಗಳ ಸಮೀಕ್ಷೆ, ಅಧಿಕಾರಕ್ಕೆ ಅಂಟಿಕೊಳ್ಳಲು ಸಿಎಂ ಸಿದ್ದರಾಮಯ್ಯನವರ ಚೇಷ್ಟೆಗಳಿಗೆ ಕರ್ನಾಟಕದ ಮಕ್ಕಳು ಬೆಲೆ ತೆರುತ್ತಿದ್ದಾರೆ ಎಂದು ವಾಗ್ದಳಿ ನಡೆಸಿದ್ದಾರೆ.
ಕರ್ನಾಟಕದ ಜಾತಿ ಸಮೀಕ್ಷೆಗೆ ತಯಾರಿ ಇಲ್ಲ. ಯೋಜನೆ ಇಲ್ಲ. ಸ್ಪಷ್ಟ ಉದ್ದೇಶವಿಲ್ಲ. ರಾಹುಲ್ಗಾಂಧಿಯಂತೆಯೇ ಆಗಿದೆ. ಈಗ ಕಾಂಗ್ರೆಸ್ ಸರ್ಕಾರವು ದಸರಾ ರಜೆಯನ್ನು ವಿಸ್ತರಿಸಿದೆ. ಶಿಕ್ಷಕರು ಈ ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ.
ಗಣತಿದಾರರಿಗೆ ಏನು ಕೇಳಬೇಕೆಂದು ತಿಳಿದಿಲ್ಲ, ಶಿಕ್ಷಕರನ್ನು ತರಗತಿಯಿಂದ ದೂರ ಇಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಕತ್ತಲೆಯಲ್ಲಿ ಬಿಡಲಾಗಿದೆ.ಇವೆಲ್ಲವೂ ಕಾಂಗ್ರೆಸ್ನ ವಿಭಜಿತ ಮತ-ಬ್ಯಾಂಕ್ ರಾಜಕೀಯಕ್ಕೆ ಮಾತ್ರ ಕಾರ್ಯನಿರ್ವಹಿಸುವ ರಾಜಕೀಯ ಪ್ರೇರಿತ ಕಸರತ್ತು ಎಂದು ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.