ಬೆಂಗಳೂರು, ಅ.10- ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರ ಜೊತೆ ನಿನ್ನೆ ರಾತ್ರಿ ಪ್ರತ್ಯೇಕ ಸಭೆ ನಡೆಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ನವೆಂಬರ್ ಕ್ರಾಂತಿಯ ಬಗ್ಗೆ ಅಲ್ಲಲ್ಲಿ ಗುಸುಗುಸು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಪ್ರತ್ಯೇಕ ಸಭೆಗಳ ಸಂಖ್ಯೆ ಹೆಚ್ಚಾಗುತ್ತಿದೆ.
ನಿನ್ನೆ ಬೆಳಗ್ಗೆ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಸತೀಶ್ಜಾರಕಿಹೊಳಿ ಮತ್ತಿತರರು ಪ್ರತ್ಯೇಕ ಸಭೆ ನಡೆಸಿದ್ದರು.
ರಾತ್ರಿ ಮುಖ್ಯಮಂತ್ರಿಯವರು ಆಪ್ತ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಸೋಮವಾರ ಎಲ್ಲಾ ಸಚಿವರನ್ನೂ ಔತಣ ಕೂಟದೊಂದಿಗೆ ಚರ್ಚೆ ನಡೆಸಲು ಆಹ್ವಾನಿಸಿದ್ದಾರೆ.
ನಿನ್ನೆ ಬೆಳಗ್ಗೆ ನಡೆದ ತ್ರಿಮೂರ್ತಿ ಸಚಿವರ ರಹಸ್ಯ ಸಭೆಯಲ್ಲಿ ಹಲವಾರು ವಿಚಾರಗಳು ಗಂಭೀರ ಚರ್ಚೆಗೊಳಗಾಗಿದ್ದವು ಎಂದು ಹೇಳಲಾಗಿದೆ. ತಮ ಖಾತೆಗಳಲ್ಲಿ ಅನ್ಯರ ಹಸ್ತಕ್ಷೇಪ ತೀವ್ರವಾಗುತ್ತಿರುವ ಬಗ್ಗೆ ಸಚಿವರುಗಳಲ್ಲಿ ಅಸಮಾಧಾನ ಮಡುಗಟ್ಟಿದೆ.
ಹಿರಿಯರಾಗಿದ್ದರೂ ಕೂಡ ಕೆಲವು ಪ್ರಭಾವಿ ನಾಯಕರ ಮಾತಿಗೆ ಮಣಿಯಬೇಕಿದೆ. ತಮಗೆ ಮಾಹಿತಿ ಇಲ್ಲದಂತೆ ಕೆಲವು ಕಡತಗಳ ಪರಿಶೀಲನೆಯಾಗುತ್ತಿದೆ ಎಂಬ ಆಕ್ಷೇಪಗಳನ್ನು ಸಚಿವರು ವ್ಯಕ್ತಪಡಿಸಿದ್ದಾರೆ.ಸಭೆಯಲ್ಲಿ ಪ್ರಮುಖವಾಗಿ ಒಳ ಮೀಸಲಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ ಸೇರ್ಪಡೆ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಕುರಿತು ಸಚಿವರು ಚರ್ಚೆ ನಡೆಸಿದ್ದರು ಎನ್ನಲಾಗಿದೆ.
ಅದೇ ರೀತಿ ಒಳ ಮೀಸಲಾತಿಯಲ್ಲಿ ಪ್ರವರ್ಗಗಳಿಂದಾಗಿರುವ ಗೊಂದಲಗಳ ಬಗ್ಗೆಯೂ ಚರ್ಚೆ ನಡೆದಿರುವುದಾಗಿ ತಿಳಿದು ಬಂದಿದೆ. ಎಡಗೈ ಸಮುದಾಯವನ್ನು ಪ್ರವರ್ಗ ಒಂದು, ಬಲಗೈ ಸಮುದಾಯವನ್ನು ಪ್ರವರ್ಗ ಎರಡು ಎಂದು ವಿಂಗಡಿಸಿ, ತಲಾ ಶೇ. 6ರಷ್ಟು ಮೀಸಲಾತಿಯನ್ನು ಹಂಚಲಾಗಿದೆ. ಆದರೆ ಎಡಗೈ ಸಮುದಾಯಕ್ಕೆ ಪ್ರವರ್ಗ ಒಂದು ಎಂಬ ಸ್ಥಾನಮಾನ ನೀಡಿರುವುದರಿಂದ ಯಾವುದೇ ನೇಮಕಾತಿ ಅಥವಾ ಅವಕಾಶಗಳಲ್ಲಿ ಮೊದಲ ಆದ್ಯತೆ ದೊರೆಯತ್ತಿದೆ.
ಪ್ರವರ್ಗ ಎರಡು ಮತ್ತು ಅನಂತರ ಉಳಿದ ಪ್ರವರ್ಗಗಳ ಸಮುದಾಯಗಳು ಅವಕಾಶ ವಂಚಿತವಾಗುತ್ತಿವೆ ಎಂಬ ಆಕ್ಷೇಪಗಳ ಬಗ್ಗೆ ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಸಚಿವ ಸಂಪುಟಸಭೆಯಲ್ಲಿ ಸಮಾಲೋಚನೆ ಮಾಡಿ, ಲೋಪಗಳನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದರು ಎನ್ನಲಾಗಿದೆ.
ಈ ಮೊದಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ, ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಪ್ರವರ್ಗಗಳ ವಿಭಜನೆಯಲ್ಲಿ ಸಮಸ್ಯೆಗಳಾಗಿವೆ ಎಂಬ ಆಕ್ಷೇಪಗಳಿವೆ. ಇದನ್ನು ಸರಿಪಡಿಸಲು ಸಚಿವ ಮುನಿಯಪ್ಪ ಅವರನ್ನು ಹೊರಗಿಟ್ಟು, ಮಹದೇವಪ್ಪ, ಪರಮೇಶ್ವರ್ ಅವರು ಚರ್ಚೆ ನಡೆಸಿದ್ದಾರೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಈ ಹಿಂದೆ ಬಸವರಾಜ ಬೊಮಾಯಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಕೆಲವು ಸ್ಪಷ್ಟನೆ ನೀಡಲು ಕೇಂದ್ರ ಸರ್ಕಾರ ಪತ್ರ ಬರೆದಿದೆ. ಈ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದ್ದು, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುಖದಲ್ಲೇ ವಾಲೀಕಿ ಜಯಂತಿಯಂದು ತಮ ಆಕ್ಷೇಪವನ್ನು ಹೊರ ಹಾಕಿದ್ದರು.
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಬಿ. ನಾಗೇಂದ್ರ ಅವರ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯಲ್ಲೇ ಇದೆ. ಕೇಂದ್ರ ಸರ್ಕಾರ ಕೆಲ ಸ್ಪಷ್ಟನೆಗಳನ್ನು ಕೇಳಿರುವುದರಿಂದ ಹೆಚ್ಚಿನ ವಿವರಗಳ ಜೊತೆ ಅಗತ್ಯ ಶಿಫಾರಸು ಮಾಡಲು ತಯಾರಿಗಳಾಗಿವೆ. ಈ ನಿಟ್ಟಿನಲ್ಲಿ ಸಮುದಾಯದ ಹಿತರಕ್ಷಣೆಗೆ ಸಂಬಂಧಪಟ್ಟಂತೆ ಸತೀಶ್ ಜಾರಕಿಹೊಳಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸುವಂತೆ ಹೈಕಮಾಂಡ್ ಮೇಲೆ ಮತ್ತೊಂದು ಸುತ್ತಿನ ಒತ್ತಡ ತರಲು ಚರ್ಚಿಸುವುದಾಗಿ ತಿಳಿದು ಬಂದಿದೆ.
ತ್ರಿಮೂರ್ತಿ ಸಚಿವರು ಚರ್ಚಿಸಿದ ವಿಚಾರಗಳನ್ನು ಸಚಿವ ಸಂಪುಟಸಭೆಯಲ್ಲಿ ಪ್ರಸ್ತಾಪಿಸುವ ಪ್ರಯತ್ನ ನಡೆಯುತ್ತಾದರೂ ಮುಖ್ಯಮಂತ್ರಿ ಅವರು ತಡೆದು ಪ್ರತ್ಯೇಕ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಅದರಂತೆ ರಾತ್ರಿ ತಮ ಮನೆಗೆ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಗಂಟೆಗೂ ಹೆಚ್ಚು ಕಾಲ ರಹಸ್ಯ ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ.ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕೂಡ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಪರಮೇಶ್ವರ್ ಸಮರ್ಥನೆ :
ಸಚಿವ ಸಂಪುಟದಲ್ಲಿ ರುವ ನಾಯಕರು ಪದೇಪದೇ ಸಭೆ ನಡೆಸು ವುದು ಹೊಸದೇನಲ್ಲ. ಕೆಲ ವಿಚಾರಗಳು ಸೂಕ್ಷ್ಮವಾ ಗಿದ್ದವು, ಹಾಗಾಗಿ ಸಂಪುಟಕ್ಕೂ ಮೊದಲೇ ಪ್ರತ್ಯೇಕ ಚರ್ಚೆ ನಡೆಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ಸಭೆ ನಡೆಸಿದ್ದನ್ನು ವಿಶೇಷವಾಗಿ ನೋಡುವ ಅಗತ್ಯ ಇಲ್ಲ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಮತ್ತು ನಾನು ಸೇರಿದಂತೆ ಬೇಕಾದ ಸ್ನೇಹಿತರು ಹಲವು ಬಾರಿ ಸಭೆ ನಡೆಸಿದ್ದೇವೆ, ಅಲ್ಲಿ ರಾಜಕೀಯ ಇರುವುದಿಲ್ಲ ಎಂದರು. ನಿನ್ನೆ ಸಚಿವ ಸಂಪುಟಸಭೆ ಇತ್ತು. ಕೆಲವು ವಿಚಾರಗಳು ಸೂಕ್ಷ್ಮವಾಗಿದ್ದವು. ಹೀಗಾಗಿ ಉಪಾಹಾರದೊಂದಿಗೆ ಚರ್ಚೆ ಮಾಡಿ, ಆನಂತರ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದಾಗಿ ಹೇಳಿದರು. ಇಂತಹ ಸಭೆ ಮೊದಲ ಬಾರಿ ಏನೂ ಅಲ್ಲ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಅವರ ಮನೆಗಳಲ್ಲೂ ಚರ್ಚೆ ಮಾಡಿದ್ದೇವೆ. ದಲಿತ ಸಮುದಾಯದ ಸಚಿವರ ಬೇಡಿಕೆಗಳು ಈಡೇರುತ್ತಿಲ್ಲ ಎಂಬ ಆಕ್ಷೇಪ ಸರಿಯಲ್ಲ ಎಂದರು.
ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಕುರಿತಂತೆ ನಾನು ಯಾರ ಮುಂದೆಯೂ ಬೇಡಿಕೆ ಇಟ್ಟಿರಲಿಲ್ಲ. ಕೊಟ್ಟರೆ, ಬಿಟ್ಟರೆ, ಆದರೆ ಎಂಬ ರೇ ಪ್ರಪಂಚಗಳು ಬೇಡ. ನಿದಿಷ್ಟವಾಗಿ ಇಂತಹವರೇ ಒತ್ತಾಯ ಮಾಡಿದರು ಎಂದರೆ ಅದಕ್ಕೆ ಪ್ರತಿಕ್ರಿಯಿಸಬಹುದು ಎಂದರು.ನವೆಂಬರ್ ಕ್ರಾಂತಿಯ ಬಗ್ಗೆಯಾಗಲಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆಯಾಗಲಿ ತಮಗೆ ಯಾವುದೇ ಮಾಹಿತಿ ಇಲ್ಲ. ಇಂತಹ ವಿಚಾರಗಳನ್ನು ಮುಖ್ಯಮಂತ್ರಿ ಅವರೇ ಹೇಳಬೇಕು. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂಬುದನ್ನು ಮುಖ್ಯಮಂತ್ರಿಯವರೇ ನಿರ್ಧರಿಸುತ್ತಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ಔತಣ ಕೂಟದ ಸಭೆಗೆ ಯಾವುದೇ ಅಜೆಂಡಾ ಇಲ್ಲ. ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿ, ಬಹಳ ದಿನ ಆಗಿದೆ. ಹಾಗಾಗಿ ಬನ್ನಿ ಎಂದು ಮುಖ್ಯಮಂತ್ರಿ ಆಹ್ವಾನ ನೀಡಿದ್ದಾರೆ. ಹೋಗುತ್ತೇವೆ ಇದರಲ್ಲಿ ಬೇರೆ ಉದ್ದೇಶ ಏನಿಲ್ಲ. ಈ ಮೊದಲು ಕೂಡ ಹಲವಾರು ಬಾರಿ ಮುಖ್ಯಮಂತ್ರಿ ಅವರು ಔತಣ ಕೂಟ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.
ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಮನೆಗೂ ಒಂದೊಂದು ಉದ್ಯೋಗ ನೀಡುವ ಭರವಸೆಯನ್ನು ಆರ್ಜೆಡಿ ಪಕ್ಷ ನೀಡಿದೆ. ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿದೆ. ಹೀಗಾಗಿ ಉದ್ಯೋಗದ ಭರವಸೆಯನ್ನು ಪ್ರಣಾಳಿಕೆಯಲ್ಲಿ ಘೋಷಿಸಿರಬಹುದು ಎಂದರು.
ಎಲ್ಲಾ ಮನೆಗಳಿಗೂ ಒಂದೇ ದಿನದಲ್ಲಿ ಉದ್ಯೋಗ ನೀಡಲಾಗುವುದಿಲ್ಲ. ಹಂತಹಂತವಾಗಿ ಬೇಡಿಕೆ ಈಡೇರಿಸಬಹುದು. ತಮ ರಾಜ್ಯದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಒಳ ಮೀಸಲಾತಿ ಗೊಂದಲದಿಂದಾಗಿ ವಿಳಂಬವಾಗಿದೆ. ಈಗ ಒಂದೊಂದೇ ಇಲಾಖೆಯಲ್ಲಿ ಹಂತಹಂತವಾಗಿ ನೇಮಕಾತಿಯನ್ನು ಆರಂಭಿಸುತ್ತಿದ್ದೇವೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ಈಡೇರಿಸಿದ್ದರೆ ನಾವು ಅವರನ್ನು ಟೀಕಿಸುವ ಸಂದರ್ಭವೇ ಬರುತ್ತಿರಲಿಲ್ಲ. ಕೊಟ್ಟ ಮಾತನ್ನು ಈಡೇರಿಸದಿದ್ದಾಗ ಟೀಕೆಗಳು ಬರುವುದು ಸಹಜ ಎಂದರು.
ಸಚಿವರ ಮೌಲ್ಯಮಾಪನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಆಡಳಿತಾತಕವಾಗಿ ಹಲವಾರು ಕ್ರಮಗಳಾಗುತ್ತವೆ. ಆದರೆ ಮೌಲ್ಯ ಮಾಪನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.ಬಾಕಿ ಬಿಲ್ಗಳ ಬಗ್ಗೆ ಮುಖ್ಯಮಂತ್ರಿ ಅವರ ಔತಣ ಕೂಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇಲ್ಲ ಎಂದರು.ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್ ಗೊಂದಲಗಳನ್ನು ಬಗೆಹರಿಸುವ ಬಗ್ಗೆ ಪ್ರಶ್ನೆಗಳು ಎದುರಾದಾಗ ಇಂತಹ ವಿಚಾರಗಳ ಚರ್ಚೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿ ನಿರ್ಗಮಿಸಿದರು.