ಬೆಂಗಳೂರು, ಅ.10– ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಗ್ರೇಟರ್ ಬೆಂಗಳೂರು ಆಡಳಿತವು ಬೆಂಗಳೂರು ಪೂರ್ವ ಮತ್ತು ದಕ್ಷಿಣ ನಗರ ಪಾಲಿಕೆಗಳ ನಡುವೆ ವಿಭಜಿಸುವ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಹದೇವಪುರ ವಿಭಜನೆಯಲ್ಲಿ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಹೆಚ್ಚಿನ ಭಾಗವನ್ನು ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಮತ್ತು ಚಿಕ್ಕ ಭಾಗವನ್ನು ದಕ್ಷಿಣ ನಗರ ಪಾಲಿಕೆಗೆ ಸೇರ್ಪಡೆಗೊಳಿಸಲಾಗಿದ್ದು, ಇದು ಗ್ರೇಟ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಸೆಕ್ಷನ್ 26(3)ರ ಉಲ್ಲಂಘನೆಯಾಗಿದೆ ಎಂದು ರಂಗನಾಥ್ ವಾದಿಸಿದ್ದರು.
ಮತದಾರರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಇತರ ಕಾರ್ಯಕರ್ತರ ಆಕ್ಷೇಪಣೆಗಳ ನಡುವೆಯೂ ಅಂಬಲಿಪುರ, ಹರಳೂರು, ಕೈಲಾಂಡ್ರಹಳ್ಳಿ, ಕಾಸವನಹಳ್ಳಿ, ಕೆಪಿಸಿಎಲ್ ಲೇಔಟ್, ಜುನ್ನಸಂದ್ರ, ದೊಡ್ಡಕೋನಲ್ಲಿ ಸೇರಿದಂತೆ ಹಲವಾರು ಗ್ರಾಮ ಗಳನ್ನು ಪೂರ್ವ ಮತ್ತು ದಕ್ಷಿಣ ನಗರಪಾಲಿಕೆಗಳ ನಡುವೆ ವಿಭಜಿಸುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದ್ದು, ಇದನ್ನು ಸರಿಪಡಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ವಿಭಾಗೀಯ ಪೀಠವು ಈ ನಿಟ್ಟಿನಲ್ಲಿ ವಿವರಣೆ ನೀಡುವಂತೆ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿ ನೋಟಿಸ್ ನೀಡಿದೆ ಎಂದು ರಂಗನಾಥ್ ಅವರು ತಿಳಿಸಿದ್ದಾರೆ.