ಹಾಸನ, ಅ.11- ಹಾಸನಾಂಬೆದೇವಿಯ ಸಾರ್ವಜನಿಕ ದರ್ಶನದ 2ನೇ ದಿನವಾದ ಇಂದು ಸಹ ಜನಸಾಗರವೇ ಹರಿದುಬಂದಿತ್ತು. ಮುಂಜಾನೆ 4 ಗಂಟೆಯಿಂದಲೇ ಭಕ್ತರು ಸರತಿಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ವಿಐಪಿ, ವಿವಿಐಪಿ ಪಾಸ್ಗಳು ಇಲ್ಲದಿರುವುದರಿಂದ ಬೋರ್ಡ್ ಪಾಸ್ ಹಾಗೂ ಶಿಷ್ಟಾಚಾರಕ್ಕೆ ಸಮಯ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.
ಮಳೆಯಲ್ಲೂ ಸಹ ದೇವಾಲಯದ ಬಳಿಯೇ ನಿಂತು ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇಂದು ಶನಿವಾರ ನಾಳೆ ಭಾನುವಾರ ಆಗಿದ್ದರಿಂದ ಹೆಚ್ಚು ಜನರು ನಿರೀಕ್ಷೆಗೂ ಮೀರಿ ದೇವಾಲಯಕ್ಕೆ ಬರುವುದರಿಂದ ಎಲ್ಲಿಯೂ ಕೂಡ ಸಣ್ಣ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ಮೊದಲ ದಿನವೇ 50 ಲಕ್ಷ ಸಂಗ್ರಹ
ನಗರದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದ್ದು, ಒಂದೇ ದಿನ 50 ಲಕ್ಷ ರೂ. ಸಂಗ್ರಹವಾಗಿದೆ. ವರ್ಷಕ್ಕೊಮೆ ದರ್ಶನ ನೀಡುವ ದೇವಿಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಬರುತ್ತಿದ್ದು, ಸಾರ್ವಜನಿಕ ದರ್ಶನದ ಮೊದಲ ದಿನವೇ ಟಿಕೆಟ್ ಹಾಗೂ ಲಾಡು ಮಾರಾಟದಿಂದ 50 ಲಕ್ಷ ಸಂಗ್ರಹವಾಗಿದೆ.
300 ರೂ. ಟಿಕೆಟ್ನಲ್ಲಿ ಆನ್ಲೈನ್ನಲ್ಲಿ 1241, ಕೌಂಟರ್ನಲ್ಲಿ 5783 ರೂ. ಸೇರಿ ಒಟ್ಟು 7,024 ರೂ. ಟಿಕೆಟ್ಗಳು ಮಾರಾಟವಾಗಿ ಒಟ್ಟು 21,07,200 ರೂ. ಸಂಗ್ರಹವಾಗಿದೆ.
1000 ರೂ. ಟಿಕೆಟ್ನಲ್ಲಿ 1278 ಆನ್ಲೈನ್, ಕೌಂಟರ್ಗಳಲ್ಲಿ 2778 ಸೇರಿ 4,056 ಟಿಕೆಟ್ಗಳು ಮಾರಾಟದಿಂದ 40,56,000 ರೂ. ಸಂಗ್ರಹವಾಗಿದೆ.
2468 ಲಡ್ಡು ಪ್ರಸಾದ ಮಾರಾಟವಾಗಿದ್ದು, 2,46,800 ರೂ. ಸಂಗ್ರಹವಾಗಿದೆ. ಮೊದಲ ದಿನವೇ ದೊಡ್ಡ ಮಟ್ಟದಲ್ಲಿ ಟಿಕೆಟ್ ಹಾಗೂ ಪ್ರಸಾದ ಮಾರಾಟದಿಂದ ಆದಾಯ ಬಂದಿದ್ದರೆ, ಇನ್ನು ಹುಂಡಿಯಲ್ಲಿ ಹೆಚ್ಚು ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.