ಬೆಂಗಳೂರು,ಅ.11- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಹಾರ ಚುನಾವಣೆಗೆ ಎಷ್ಟು ಕೋಟಿ ಹಣ ಲೂಟಿ ಮಾಡಿ ರಾಹುಲ್ ಗಾಂಧಿಗೆ ಚಂದಾ ನೀಡುವ ಭರವಸೆ ಕೊಟ್ಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಎಟಿಎಂ ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನೆಸಿದ್ದಾರೆ.
ಬಿಹಾರ ಚುನಾವಣೆಗಾಗಿ ಹೈಕಮಾಂಡ್ಗೆ 300 ಕೋಟಿ ರೂ. ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಕರ್ಮಕಾಂಡ ನೋಡುತ್ತಿದ್ದರೆ ಇನ್ನು ಸಿಎಂ, ಡಿಸಿಎಂ, ಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ಗೆ ಕಪ್ಪ ನೀಡುತ್ತಿರಬೇಡ ನೀವೇ ಊಹಿಸಿಕೊಳ್ಳಿ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಜನರಿಗೆ ಕ್ಯಾಸಿನೋ, ಜೂಜು, ಬೆಟ್ಟಿಂಗ್ ಆಡಿಸಿ ಬಡವರ ಮನೆಹಾಳು ಮಾಡಿ ಅಡ್ಡದಾರಿಯಲ್ಲಿ ದುಡ್ಡು ಮಾಡುವುದು. ಆ ಪಾಪದ ಹಣದಲ್ಲಿ ಟಿಕೆಟ್ ಪಡೆದು, ಚುನಾವಣೆ ಎದುರಿಸಿ, ಹೈಕಮಾಂಡ್ ಗೆ ಕಪ್ಪ ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವುದು. ಆಮೇಲೆ ಮಂತ್ರಿಗಿರಿ ಬಳಸಿಕೊಂಡು ಇನ್ನಷ್ಟು ಲೂಟಿ ಮಾಡುವುದು. ಇದು ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಹೆಣೆದಿರುವ ವಿಷ ವರ್ತುಲ ಎಂದು ವಾಗ್ದಳಿ ನಡೆಸಿದ್ದಾರೆ.
ತೆಲಂಗಾಣ ಚುನಾವಣೆಗೆ, ಲೋಕಸಭೆ ಚುವಾವಣೆಗೆ ವಾಲೀಕಿ ನಿಗಮದ ಹಣ ಸೇರಿದಂತೆ ಸಾವಿರಾರು ಕೋಟಿ ಲಪಟಾಯಿಸಿದ್ದಾಯ್ತು. ಈಗ ಬಿಹಾರ ಚುನಾವಣೆಗೆ ಕನ್ನಡಿಗರ ತೆರಿಗೆ ಹಣ ಇನ್ನೆಷ್ಟು ಲೂಟಿ ಆಗುತ್ತದೆಯೋ ಗೊತ್ತಿಲ್ಲ. ಈ ರೀತಿ ಪಾಪದ ಹಣದಲ್ಲಿ ಚುನಾವಣೆ ನಡೆಸುವ ಕಾಂಗ್ರೆಸ್ ನಾಯಕರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆಯೇ? ನಾಚಿಕೆಯಾಗಬೇಕು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಸುರಕ್ಷತೆ ಎಲ್ಲಿದೆ?
ಮತ್ತೊಂದು ಪೋಸ್ಟ್ನಲ್ಲಿ ಕುಸಿತು ಬಿದ್ದಿರುವ ಕಾನೂನು ಸುವ್ಯವಸ್ಥೆಯ ವಿರುದ್ದವೂ ಟೀಕಿಸಿರುವ ಅಶೋಕ್, ಮಹಿಳೆಯರಿಗೆ ಸುರಕ್ಷತೆಯ ಗ್ಯಾರೆಂಟಿ ಎಲ್ಲಿದೆ ಸ್ವಾಮಿ? ಎಂದು ತರಾಟೆಗೆ ತೆಗದುಕೊಂಡಿದ್ದಾರೆ.
ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡುತ್ತಿರುವ ಗೃಹ ಸಚಿವ ಪರಮೇಶ್ವರ್ ಅವರು, ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿ ಗೂಂಡಾಗಳ ಕೈಗೆ ಅಧಿಕಾರ ಕೊಟ್ಟಿದೆ. ಬೆಂಗಳೂರಿನಂತಹ ರಾಜಧಾನಿಯಲ್ಲೇ ಮಹಿಳೆಯರ ಮೇಲೆ ಹಲ್ಲೆ ದೌರ್ಜನ್ಯ, ಅತ್ಯಾಚಾರ ಆಗುತ್ತಿದ್ದರೂ ಕ್ರಮ ಕೈಗೊಳ್ಳದೆ ಗೂಂಡಾಗಳ ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಬೀದಿ ಕಾಮಣ್ಣರು ರಾಜಾರೋಷವಾಗಿ ಮಹಿಳೆಯರ ಮೇಲೆ ಎರಗುತ್ತಿದ್ದಾರೆ. ಸಿಲಿಕಾನ್ ಸಿಟಿಯನ್ನು ಕ್ರೈಮ್ ಸಿಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದ ಇಮೇಜ್ಗೆ ಧಕ್ಕೆ ತರುತ್ತಿದೆ ಎಂದು ಸರ್ಕಾರ ಮೇಲೆ ಟೀಕೆಗಳ ಸುರಿಮಳೆಗೈದಿದ್ದಾರೆ.