ಬೆಂಗಳೂರು, ಅ.11- ಸದ್ಯಕ್ಕೆ ಸಚಿವ ಸಂಪುಟ ಪುನರ್ ರಚನೆ ಅಥವಾ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆಗಳಿಲ್ಲ. ಕೆಲವರಿಗೆ ಹೆಚ್ಚು ಆತುರವಿದೆ. ಅಂಥವರು ಅನಗತ್ಯವಾಗಿ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ಷೇಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‌ಗಳ ಚುನಾವಣೆಗಳು ಹತ್ತಿರ ಬರುತ್ತಿವೆ. ಇದರ ಪೂರ್ವ ತಯಾರಿ ಕುರಿತು ಮುಖ್ಯಮಂತ್ರಿಯವರು ಸಚಿವರಿಗೆ ಸೂಚನೆಗಳನ್ನು ನೀಡಲು ಔತಣ ಕೂಟ ಆಯೋಜಿಸಿದ್ದಾರೆ. ಇದರ ಹೊರತಾಗಿ ಬೇರೆ ಏನೂ ಇಲ್ಲ ಎಂದು ಸ್ಪಷ್ಟಪಡಿದಿರು.
ಸದ್ಯಕ್ಕೆ ಸಚಿವ ಸಂಪುಟ ಪುನರ್ ರಚನೆ, ಅಧಿಕಾರ ಹಸ್ತಾಂತರ ಎಂಬ ಸಾಧ್ಯತೆಗಳಿಲ್ಲ.
ಲಾಲ್‌ಬಾಗ್‌ನಲ್ಲಿ ಇಂದು ನಾಗರಿಕರ ಜೊತೆ ಮಾತನಾಡುವಾಗ ಕೆಲವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗ ಬೇಕೆಂದು ಹೇಳಿದ್ದಾರೆ. ನಾನು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜಕೀಯ ಮಾತನಾಡದಂತೆ ಸೂಚನೆ ನೀಡಿದ್ದೇನೆ. ಇಲ್ಲಿ ನಾನು ಜನರ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲೇ ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಗಿ ಪ್ರಸಾರ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ, ಕೆಲವು ಮಾಧ್ಯಮಗಳು ಸುದ್ದಿ ತಿರುಚಿ ವಿವಾದ ಸೃಷ್ಟಿಸುತ್ತಿವೆ. ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು ನೀವು ಮುಖ್ಯಮಂತ್ರಿ ಆಗಬೇಕು, ಆ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ತಿರುಚಿ ಪ್ರಸಾರ ಮಾಡುತ್ತಿವೆ. ನೀವು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ನಾನು ಸಿಎಂ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. ನೀವು ಇದೇ ರೀತಿ ಸುದ್ದಿ ತಿರುಚುವುದಾದರೆ, ನಾನು ನಿಮಗೆ ಸಹಕಾರ ನೀಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ, ಮಾಧ್ಯಮಗೋಷ್ಠಿ ನಡೆಸುವುದೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಆ ಹೇಳಿಕೆ ಎಲ್ಲಿ ನೀಡಿದ್ದೇನೆ? ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ. ನಾನು ಆ ರೀತಿ ಹೇಳಿಲ್ಲ, ಅದರ ಅಗತ್ಯವೂ ನನಗೆ ಇಲ್ಲ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಅವಕಾಶ ಕೊಟ್ಟಿದ್ದಾನೆ, ಮುಖ್ಯಮಂತ್ರಿಯಾಗುವ ಅವಕಾಶ ಯಾವಾಗ ಕೊಡುತ್ತಾನೆ ಎಂಬುದು ಗೊತ್ತಿದೆ. ಇದೇ ರೀತಿ ಮಾಧ್ಯಮಗಳು ತಪ್ಪು ಮಾಹಿತಿ ನೀಡುವುದು ಮುಂದುವರೆಸಿದರೆ, ನನಗೆ ಮಾಧ್ಯಮಗಳನ್ನು ಬಿಟ್ಟು ರಾಜಕಾರಣ ಮಾಡುವುದು ಗೊತ್ತಿದೆ.
ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರಿಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ಆದರೆ ಒಳ್ಳೆಯ ಕೆಲಸ ಬಿಟ್ಟು ವಿವಾದ ಸೃಷ್ಟಿಸಲು ಕೆಲವು ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.