ಮಂಡ್ಯ, ಅ.11– ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದ್ದು, ಆ ಬಳಿಕ ಸಂಪುಟ ಪುನರ್ ರಚನೆಯ ಬಗ್ಗೆ ಮುಖ್ಯಮಂತ್ರಿ ಮತ್ತು ಪಕ್ಷ ಚರ್ಚೆ ಮಾಡಿ ನಿರ್ಧರಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 138 ಮಂದಿ ಶಾಸಕರು ಸಚಿವರಾಗಬೇಕೆಂಬ ಆಕಾಂಕ್ಷೆ ಹೊಂದಿರುತ್ತಾರೆ. ಆದರೆ 34 ಮಂದಿಗೆ ಮಾತ್ರ ಅವಕಾಶ ಸಿಕ್ಕಿದೆ. ಪಂಚಾಯಿತಿಗಳಲ್ಲಿ 10 ತಿಂಗಳಿಗೆ ಅಧಿಕಾರ ಬದಲಾಗುತ್ತದೆ, ಸರ್ಕಾರದಲ್ಲಿ ಎರಡೂವರೆ ವರ್ಷದ ಬಳಿಕ ಬದಲಾವಣೆ ಕೇಳುವುದು ತಪ್ಪೇ? ಎಂದು ಪ್ರಶ್ನಿಸಿದರು.
ಸಂಪುಟ ಪುನರ್ ರಚನೆಯ ವೇಳೆ 34 ಜನರಲ್ಲಿ ಯಾರನ್ನು ತೆಗೆಯುತ್ತಾರೋ ಗೊತ್ತಿಲ್ಲ. 10 ಜನ ತೆಗೆಯುತ್ತಾರೋ, 33 ಜನರನ್ನು ತೆಗೆಯುತ್ತಾರೋ ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಸದ್ಯಕ್ಕೆ ಇದ್ಯಾವ ವಿಚಾರಗಳು ಇಲ್ಲ ಎಂದರು.
ಸಚಿವರು ಜಿಲ್ಲೆಗಳಲ್ಲಿ ಯಾವ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿರ್ವಹಿಸುತ್ತಿರುವ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಲು ಸಚಿವರ ಔತಣ ಕೂಟ ಆಯೋಜಿಸಿದ್ದಾರೆ. ಇದನ್ನು ಬೇರೆ ರೀತಿ ಬಿಂಬಿಸಬಾರದು, ಔತಣಕೂಟದಲ್ಲಿ ನಿರ್ಗಮಿಕ ಸಚಿವರಿಗೆ ಸಮಾಧಾನ ಪಡಿಸಲಾಗುವುದು ಎಂಬುವುದು ಕೇವಲ ವದಂತಿ ಎಂದರು.
ಈ ಮುಂಗಾರಿನಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಕಾವೇರಿ ನದಿ ಪಾತ್ರದಲ್ಲೂ ಕೃಷಿ ಮತ್ತು ತೋಟಗಾರಿಕೆ ಬೆಲೆ ಹಾನಿಯಾಗಿದೆ. ಮಳೆ ನಿಂತ ಮೇಲೆ ನಿರ್ಧಿಷ್ಠ ಪ್ರಮಾಣದ ಅಂದಾಜನ್ನು ಜಂಟಿ ಸರ್ವೇ ಮೂಲಕ ಗುರುತಿಸಿ, ತಕ್ಷಣ ಪರಿಹಾರ ನೀಡಲಾಗುವುದು.
ಈ ಮೊದಲು ಒಣ ಬೇಸಾಯಕ್ಕೆ 8,500, ನೀರಾವರಿಗೆ 22500 ರೂ.ಗಳನ್ನು ಹೆಕ್ಟೇರ್‌ಗೆ ಪರಿಹಾರ ನೀಡಲಾಗುತ್ತಿತ್ತು, ಅದನ್ನು ಹೆಚ್ಚಿಸಲಾಗಿದೆ.
ರೈತರ ಜೊತೆ ಚರ್ಚಿಸಿ ಬೇಡಿಕೆಯಂತೆ ಒಣ ಬೇಸಾಯಕ್ಕೆ 17 ಸಾವಿರ, ನೀರಾವರಿಗೆ 21,500, ಬಹು ಮಾದರಿ ಬೆಲೆಗೆ 31 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ.
ಒಂದು ತಿಂಗಳೊಳಗಾಗಿಯೇ ರೈತರ ಖಾತೆಗೆ ಪರಿಹಾರ ಹಣ ಪಾವತಿಸುವುದಾಗಿ ಹೇಳಿದರು. ಇದರ ಜೊತೆಗೆ ಕೃಷಿ ಬೆಲೆ ವಿಮೆ ಪರಿಹಾರ ಕೂಡ ದೊರೆಯಲಿದೆ ಎಂದು ಹೇಳಿದರು.