ಬೆಂಗಳೂರು, ಅ.12- ಶಾಸಕ ಮುನಿರತ್ನ ಅವರ ಮೇಲೆ ಯಾರು ಹಲ್ಲೆ ಮಾಡಿದ್ದಾರೋ ಅವರ ವಿರುದ್ಧ ವಿಳಂಬನೀತಿ ತೋರದೇ ತಕ್ಷಣವೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು,ಯಾವುದೇ ಪಕ್ಷದ ಶಾಸಕರಿರಲಿ. ಹಲ್ಲೆ ನಡೆಸುವುದು ಯಾರೊಬ್ಬರಿಗೂ ಶೋಭೆ ತರುವುದಿಲ್ಲ. ಮುನಿರತ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಸ್ಪಷ್ಟ ಸಂದೇಶ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಕಾರ್ಯಕ್ರಮ ಯಶಸ್ವಿಯಾಗಬೇಕು ಅಂದರೆ, ಎಲ್ಲರಿಗೂ ಆಹ್ವಾನ ಕೊಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಸಾಕಷ್ಟು ಅನುಭವ ಇದೆ. ನಿಮಂತಹವರಿಂದಲೇ ಈ ರೀತಿ ಎಡವಟ್ಟು ಆದರೆ ಹೇಗೆ ? ಎಂದು ಪ್ರಶ್ನಿಸಿದರು.
ಈ ಕಾರ್ಯಕ್ರಮ ಮಹತ್ವ ಕಳೆದುಕೊಂಡಿದೆ.ಇಲ್ಲಿ ಬರೀ ವೈಯಕ್ತಿಕ ಪ್ರತಿಷ್ಠೆ, ದ್ವೇಷ, ವೈಮನಸ್ಯ ಎದ್ದು ಕಾಣುತ್ತಿದೆ. ನಿಮ ನಡೆ ಸರಿಯಲ್ಲ . ಡಿಕೆ ಶಿವಕುಮಾರ್ ವರ್ಸಸ್ ಮುನಿರತ್ನ ಎಂಬಂತಾಗುತ್ತದೆ. ನಿಮ ಕಾರ್ಯಕ್ರಮವನ್ನು ನೀವೇ ಸೋಲಿಸುತ್ತೀರಾ ? ಇದು ಜನರ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮ ಎಂದರು.
ಇಂತಹ ಘಟನೆಗಳಿಗೆ ನೀವೇ ಕಾರಣೀಭೂತರು. ನೀವು ನೀಡಿರುವ ಸ್ವಾತಂತ್ರ್ಯದಿಂದ ಕಾರ್ಯಕರ್ತರು ಅವರಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.ಕಾರ್ಯಕ್ರಮ ಅಲ್ಲ, ಹಲ್ಲೆ ಎಂದುಕೇಳಿದ್ದೇನೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಬೆಂಗಳೂರಿನ ಆರು ಭಾಗಗಳಲ್ಲಿ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ. ಒಳ್ಳೆಯದು. ಈ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗೆ ಅವಮಾನ ಮಾಡುವುದು, ಹಲ್ಲೆ ನಡೆಸುವುದು, ತಿರಸ್ಕಾರ ಮಾಡುವುದು ಸರಿಯಲ್ಲ. ಆಹ್ವಾನ ಕೊಡದೇ ಈ ರೀತಿ ಕಾರ್ಯಕ್ರಮ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾದ ದಾರಿಯಲ್ಲಿ ನಡೆದುಕೊಳ್ಳುವುದು ನಿಮ ಕರ್ತವ್ಯ ಎಂದು ಹೇಳಿದರು.