Monday, October 13, 2025
Homeರಾಜ್ಯಬೆಂಗಳೂರಲ್ಲಿ ಸಾರ್ವಜನಿಕರ ಜೊತೆ ಡಿಸಿಎಂ ಡಿಕೆಶಿ ಸಂವಾದ

ಬೆಂಗಳೂರಲ್ಲಿ ಸಾರ್ವಜನಿಕರ ಜೊತೆ ಡಿಸಿಎಂ ಡಿಕೆಶಿ ಸಂವಾದ

DCM DK Shivkumar interacts with the public in Bengaluru

ಬೆಂಗಳೂರು, ಅ.12- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎರಡನೇ ದಿನವೂ ತಮ್ಮ ಉದ್ಯಾನ ನಡಿಗೆಯನ್ನು ಮುಂದುವರೆಸಿದ್ದು, ಬೆಂಗಳೂರು ಉತ್ತರ ಪಾಲಿಕೆಯ ಮತ್ತಿಕೆರೆಯಲ್ಲಿರುವ ಜೆ.ಪಿ. ಪಾರ್ಕ್‌ನಲ್ಲಿ ಸಾರ್ವಜನಿಕರ ಜೊತೆ ಸಂವಾದ ನಡೆಸಿದರು. ಬಿ.ಕೆ.ನಗರದ ಫಾತಿಮಾ ಅವರು, ವಿದ್ಯುತ್‌ ಸಮಸ್ಯೆ ಬಗ್ಗೆ ದೂರು ಹೇಳಿದರು. ಉಚಿತ ವಿದ್ಯುತ್‌ ನೀಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದಾಗ, ವಿದ್ಯುತ್ತೇ ಇಲ್ಲ ಉಚಿತ ತೆಗೆದುಕೊಂಡು ಏನು ಮಾಡೋಣ ಎಂದು ಪ್ರತಿಕ್ರಿಯಿಸಿದರು.

ಸಂಜೆ 7.30ರ ಮೇಲೆ ಉದ್ಯಾನವನದೊಳಗೆ ಬಿಡುತ್ತಿಲ್ಲ, ವಾಕಿಂಗ್‌ ಮಾಡಲು ಸಮಸ್ಯೆಯಾಗುತ್ತಿದೆ. ಸ್ವಚ್ಛತೆಯಿಲ್ಲ ಎಂದು ನಾಗರಿಕರು ದೂರಿದರು.
ಇದು ರಾಜಕೀಯಕ್ಕಾಗಿ ಮಾಡುತ್ತಿರುವ ಸಂವಾದ ಅಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕು, ಬೆಂಗಳೂರಿಗೆ ಹೊಸ ಸ್ವರೂಪ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ವೇದಿಕೆಯಲ್ಲಿ ಹೇಳಿದರು.

ಪ್ರತಿ ಶನಿವಾರ, ಭಾನುವಾರ ಉದ್ಯಾನವನಗಳಿಗೆ ಹೋಗಿ ಜನರನ್ನು ಭೇಟಿ ಮಾಡುತ್ತೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕವಾಗಿ ಮುಕ್ತ ಆಹ್ವಾನ ನೀಡಿದ್ದೇವೆ.
ಇಲ್ಲಿನ ಜನಪ್ರತಿನಿಧಿ (ಶಾಸಕ ಮುನಿರತ್ನಂ ನಾಯ್ಡು) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ ಮನಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ ಎಂದು ಹೇಳಿದರು.

ಇಂತಹ ಪ್ರತಿನಿಧಿಯನ್ನು ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಾರ್ವಜನಿಕರ ದೂರುಗಳನ್ನು ಆಲಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮ.

ನಿನ್ನೆ ಲಾಲ್‌ಬಾಗ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ರಿಜ್ವಾನ್‌ ಅರ್ಷದ್‌ ಬಂದಿದ್ದರು, ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಿದರು. ಮುನಿರತ್ನ ಕೂಡ ಅದೇ ರೀತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆಹ್ವಾನ ನೀಡಲು ಇದು ಶಿಲಾನ್ಯಾಸ ಕಾರ್ಯಕ್ರಮವಲ್ಲ, ಆಗಮಿಸಿದ ಜನ ಪ್ರತಿನಿಧಿಗಳಿಗೆ ಸೂಕ್ತ ಗೌರವ ನೀಡುವುದು ನಮಗೆ ಗೊತ್ತಿದೆ ಎಂದರು.

ವಿಧಾನಸಭೆ ಹಾಗೂ ನಿನ್ನೆ ನಡೆದಂತಹ ಜಿಬಿಎ ಸಭೆಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ಇತ್ತು. ಇಲ್ಲಿ ಬಂದು ಗದ್ದಲ ಮಾಡುವುದು ಸರಿಯಲ್ಲ, ನಾನು ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ರಮವನ್ನು ಕಳೆದ ವರ್ಷವೂ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ನಡೆಸಿದ್ದೇನೆ. ಇದು ಹೊಸದಲ್ಲ ಎಂದರು.

ತಮ ಮೇಲೆ ಹಲ್ಲೆ ನಡೆಸಲು ರೌಡಿಗಳನ್ನು ಕರೆಸಲಾಗಿತ್ತು. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುನಿರತ್ನ ಅವರ ಮನಸ್ಸಿನಲ್ಲಿದ್ದರೆ, ಅದಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದರು.ಮುನಿರತ್ನ ಅವರನ್ನು ಇಲ್ಲಿ ನಾಗರಿಕರೇ ಹೊಡೆದು, ಓಡಿಸುತ್ತಿದ್ದರು. ನಾವ್ಯಾರೂ ಮುಟ್ಟುತ್ತಿರಲಿಲ್ಲ. ಜನರಿಗೆ ಅಷ್ಟರ ಮಟ್ಟಿನ ಆಕ್ರೋಶ ಇದೆ. ಕಮೀಷನ್‌ ಕೊಟ್ಟಿಲ್ಲ ಎಂದು 10 ವರ್ಷದಿಂದ ಶಾಸಕರು ಬಿಲ್‌ ಪಾವತಿಸಲು ಬಿಟ್ಟಿಲ್ಲ ಎಂದು ಗುತ್ತಿಗೆದಾರರು ದೂರು ಹೇಳಿಕೊಂಡಿದ್ದಾರೆ. ಅದರ ತನಿಖೆ ನಡೆಸಲಾಗುವುದು ಎಂದರು.

ಮುನಿರತ್ನ ಆರ್‌ಎಸ್‌‍ಎಸ್‌‍ನ ಸಮವಸ್ತ್ರ ಧರಿಸಿ, ಇಲ್ಲಿಗೆ ಬಂದು ಗಲಾಟೆ ಮಾಡುವ ಮೂಲಕ ಆ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೂ, ಆರ್‌ಎಸ್‌‍ಎಸ್‌‍ಗೂ ಏನು ಸಂಬಂಧ? ಅವರಿಗೆ ರಾಜಕಾರಣ ಮಾಡಬೇಕು ಎಂಬ ಉದ್ದೇಶ ಇದೆ. ಮಾಧ್ಯಮಗಳು ಪ್ರಚಾರ ನೀಡುತ್ತವೆ. ಅದಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇಂತಹವರಿಂದ ಆರ್‌ಎಸ್‌‍ಎಸ್‌‍ಗೂ ಅಗೌರವ ಎಂದು ತಿರುಗೇಟು ನೀಡಿದರು.

ಬೆಂಗಳೂರಿನ 5 ಪಾಲಿಕೆಗಳಲ್ಲೂ ಜನರ ಸಮಸ್ಯೆಯನ್ನು ಆಲಿಸಲು ಉದ್ಯಾನವನ ನಡಿಗೆ ಆರಂಭಿಸಲಾಗಿದೆ. ಜನರ ಸಮಸ್ಯೆಗಳನ್ನು ಕೇಳಿ ಅವರ ಫೋನ್‌ ನಂಬರ್‌ಗಳನ್ನು ಪಡೆದು ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇನ್ನೂ ಸಮಸ್ಯೆಗಳಿದ್ದರೆ 1533 ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಜೆ.ಪಿ.ಪಾರ್ಕ್‌ನಲ್ಲಿ ಹಲವಾರು ಸಮಸ್ಯೆಗಳಿರುವುದನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ. ಈಜುಕೊಳ ಸ್ಥಗಿತಗೊಂಡಿದೆ, ಮಕ್ಕಳ ಆಟದ ಸ್ಥಳ, ಯೋಗ ಕೇಂದ್ರ, ಶೌಚಾಲಯ, ಮಕ್ಕಳ ರೈಲು ಎಲ್ಲವೂ ಅರ್ಧಕ್ಕೆ ನಿಂತಿವೆ. ಈ ಅವ್ಯವಸ್ಥೆಗಳನ್ನು ಹಾಗೂ ಮಳೆ ನೀರಿನ ಸಮಸ್ಯೆ ಮತ್ತು ರಸ್ತೆ ಗುಂಡಿಗಳನ್ನು ಸರಿಪಡಿಸುವುದಾಗಿ ಹೇಳಿದರು.

RELATED ARTICLES

Latest News