ಬೆಂಗಳೂರು,ಅ.13- ಗ್ಯಾರೆಂಟಿಗಳಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿರುವುದು ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಗಳು ರಾಜ್ಯವನ್ನು ಹೇಗೆ ಅಧೋಗತಿಗೆ ತಳ್ಳಿದೆ ಎನ್ನುವುದಕ್ಕೆ ಮತ್ತೊಮೆ ಕನ್ನಡಿ ಹಿಡಿದಿದಂತಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸರ್ಕಾರದ ವಿರುದ್ದ ಸಾಲು ಸಾಲು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿರುವ ಅವರು, ಇನ್ನೆಷ್ಟು ದಿನ ಈ ಭಂಡ ಬಾಳು ಸಿ.ಎಂ ಸಿದ್ದರಾಮಯ್ಯನವರೇ? ಸಾಕು ನಿಮ ದುರಾಡಳಿತ. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಟೀಕಾ ಪ್ರಹಾರ ನಡೆಸಿದ್ದಾರೆ.
ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎನ್ನುವ ಹಪಹಪಿಯಿಂದ ಬೇಕಾಬಿಟ್ಟಿ ಗ್ಯಾರೆಂಟಿ ಯೋಜನೆಗಳನ್ನು ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಗ್ಯಾರೆಂಟಿಗಳು ಬಿಸಿ ತುಪ್ಪವಾಗಿದೆ ಎಂದು ವಾಗ್ದಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಪಾಪರ್ ಆಗಿದೆ ಎನ್ನುವ ಕೂಗು ಕಾಂಗ್ರೆಸ್ ಪಕ್ಷದಲ್ಲೇ ಏಳುತ್ತಿದ್ದು ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸರ್ಕಾರದ ಬಳಿ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಲೂ ದುಡ್ಡಿಲ್ಲ ಎಂದು ಒಪ್ಪಿಕೊಂಡಿದ್ದರು. ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ರಸ್ತೆ ಬೇಕು ಅಂದರೆ ಗ್ಯಾರೆಂಟಿ ಸ್ಕೀಮ್ ಬಂದ್ ಮಾಡಬೇಕಾಗುತ್ತದೆ ಎಂದು ಹೇಳಿದ್ದರು ಎಂಬುದನ್ನು ನೆನಪಿಸಿಕೊಟ್ಟಿದ್ದಾರೆ.
ಈಗ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕರು, ಮಾಜಿ ಸಚಿವರಾದ ಆರ್.ವಿ.ದೇಶ್ಪಾಂಡೆ ಅವರು ನಾನು ಮುಖ್ಯಮಂತ್ರಿ ಆಗಿದ್ದರೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರಲಿಲ್ಲ ಎಂದು ಹೇಳಿರುವುದು ಸಿಎಂ ಅವರು ಎಷ್ಟು ಅಸಮರ್ಥ ಮುಖ್ಯಮಂತ್ರಿ ಎನ್ನುವುದನ್ನ ಮತ್ತೊಮೆ ಸಾಬೀತು ಮಾಡಿದೆ ಎಂದು ವಾಗ್ದಳಿ ನಡೆಸಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ಕಾಂಗ್ರೆಸ್ ಸರ್ಕಾರದ ರಾಜಕೀಯ ತೆವಲಿಗೆ ಇಡೀ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದ್ದು, ಜಾತಿಗಣತಿ ಸಮೀಕ್ಷಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ತಮ ದಿನನಿತ್ಯದ ಕೆಲಸಗಳಿಗಾಗಿ ಪಡದಾಡುವ ಎದುರಾಗಿದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.
ಶಾಲೆಗಳಲ್ಲಿ ಶಿಕ್ಷಕರಿಲ್ಲ, ಬೆಸ್ಕಾಂ, ಬಿಡಬ್ಲುಎಸ್ ಎಸ್ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ.ಆರ್ ಟಿಒ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ. ಸಿಎಂ ಸಿದ್ದರಾಮಯ್ಯ ನವರೇ, ತಮ ಕುರ್ಚಿ ಉಳಿಸಿಕೊಳ್ಳುವ ನಾಟಕಕ್ಕೆ ಕನ್ನಡಿಗರು ಶಿಕ್ಷೆ ಅನುಭವಿಸುತ್ತಿದ್ದಾರೆ. ಡಿನ್ನರ್ ಮೀಟಿಂಗ್ ಮಾಡುವ ಬದಲು ಒಮೆ ಬೀದಿಗಿಳಿದು ಜನರ ಅಭಿಪ್ರಾಯ ಕೇಳಿ. ಜನ ತಮ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೊಂದು ಪೋ ಸ್ಟ್ನಲ್ಲಿ ಮತ್ತೊಮೆ ಸಾರಿಗೆ ಮುಷ್ಕರದ ಬರೆ!ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ದೀಪಾವಳಿ ಉಡುಗೊರೆ!ಈ ಬಾರಿ ದೀಪಾವಳಿ ಹಬ್ಬಕ್ಕೆ ಜನಸಾಮಾನ್ಯರು ಊರಿಗೆ ಹೋಗಲು ಬಸ್ಸಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ ಎಂದು ಎಚ್ಚರಿಸಿದ್ದಾರೆ.
ತಮ ಬೇಡಿಕೆ ಈಡೇರಿಸದಿದ್ದರೆ ಮತ್ತೊಮೆ ಅಕ್ಟೋಬರ್ 15ರಿಂದ ಮುಷ್ಕರ ನಡೆಸುವುದಾಗಿ ಸಾರಿಗೆ ನಿಗಮಗಳ ನೌಕರರು ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ಬಸ್ಸುಗಳ ನಿರ್ವಹಣೆಗೂ ದುಡ್ಡಿಲ್ಲ. ಸಾರಿಗೆ ನೌಕರರ ಸಂಬಳ, ಹಿಂಬಾಕಿ ಪಾವತಿಗೂ ದುಡ್ಡಿಲ್ಲ. ಬಸ್ ನಿಲ್ದಾಣಗಳ ನಿರ್ವಹಣೆಗೂ ದುಡ್ಡಿಲ್ಲ. ಒಟ್ಟಿನಲ್ಲಿ ಪಾಪರ್ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಯಾವುದಕ್ಕೂ ದುಡ್ಡಿಲ್ಲ ಎನ್ನುವ ದುಸ್ಥಿತಿ ಎದುರಾಗಿದೆ ಎಂದು ಆರೋಪ ಮಾಡಿದ್ದಾರೆ.
ಖಾಸಗಿ ಶಾಲೆಯ ಮಕ್ಕಳು ದಸರಾ ರಜೆ ನಂತರ ಶಾಲೆಗೆ ಮರಳಿ ಪಾಠ, ಕಲಿಕೆಯಲ್ಲಿ ತೊಡಗಿದ್ದರೆ ಸರ್ಕಾರಿ ಶಾಲೆಯ ಮಕ್ಕಳು ಪಾಠವಿಲ್ಲದೆ ಸೊರಗುತ್ತಿದ್ದಾರೆ. ಸಿದ್ದರಾಮಯ್ಯ ನವರೇ, ತಮ ರಾಜಕೀಯ ತೆವಲಿಗೆ ಪಾಪ ಸರ್ಕಾರಿ ಶಾಲೆಯ ಬಡ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ. ಎಸೆಸೆಲ್ಸಿಯಂತಹ ನಿರ್ಣಾಯಕ ಘಟ್ಟದಲ್ಲಿರುವ ವಿದ್ಯಾರ್ಥಿಗಳು ಒಂದು ತಿಂಗಳು ಶಾಲೆಯಿಂದ ಹೊರಗೆ ಉಳಿದರೆ ಅವರ ಕಲಿಕಾ ಮಟ್ಟದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಇದು ಅವರ ಫಲಿತಾಂಶದ ಮೇಲೆ ಪರಿಣಾಮ ಬೀರಿದರೆ ಅವರ ಭವಿಷ್ಯಕ್ಕೆ ಪೆಟ್ಟು ಬೀಳುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ ರಾಜಕೀಯ ತೆವಲಿಗೆ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಎಸೆಸೆಲ್ಸಿ ಶಿಕ್ಷಕರಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಿ ಈ ಕೂಡಲೇ ಶಾಲೆ ಪುನರಾರಂಭಿಸಿ. ನಿಮ ಕುರ್ಚಿ ಉಳಿಸಿಕೊಳ್ಳಲು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಪೂರ್ವಸಿದ್ಧತೆ ಇಲ್ಲದ ತರಾತುರಿಯ ಕುರ್ಚಿ ಬಚಾವೋ ಜಾತಿಗಣತಿ ಸಮೀಕ್ಷೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಿ ಒಂದು ತಿಂಗಳು ಸರ್ಕಾರಿ ಶಾಲೆಗಳಿಗೆ ಬೀಗ ಜಡಿದು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದಾಯ್ತು, ಈಗ ಅಂಗನವಾಡಿ ಕಾರ್ಯಕತೆಯರನ್ನೂ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಿ ಹಳ್ಳಿಗಾಡಿನ ಬಡ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದೆ/ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ.
ಸಿದ್ದರಾಮಯ್ಯ ನವರೇ, ನಿಮ ಜಾತಿಗಣತಿ ನಾಟಕದಿಂದ ಸಾರ್ವಜನಿಕರಿಗೆ ಎಷ್ಟು ತಿಂದರೆ ಆಗುತ್ತಿದೆ ಎನ್ನುವ ಬಗ್ಗೆ ನಿಮಗೆ ಅರಿವೇ ಇಲ್ಲ. ನಿಮಗೆ ಕುರ್ಚಿ ಉಳಿಸಿಕೊಳ್ಳುವ ಹಠ, ಕನ್ನಡಿಗರಿಗೆ ಪರದಾಟ. ನಿಮ ನಾಲಾಯಕ್ ಸರ್ಕಾರ ಯಾವಾಗ ತೊಲಗುತ್ತೋ ಎಂದು ಕನ್ನಡಿಗರು ಎದುರು ನೋಡುತ್ತಿದ್ದಾರೆ ಎಂದು ಅಶೋಕ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.