ಬೆಂಗಳೂರು, ಅ.15- ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದೆ. ಗೂಗಲ್ ಸಂಸ್ಥೆಯವರು ರಾಜ್ಯ ಬಿಟ್ಟು ಹೊರ ಹೋಗಲು ಬೇರೆಯೇ ಕಾರಣ ಇರಬಹುದು. ಆದರೆ ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ವ್ಯತಿರಿಕ್ತವಾದ ಪರಿಸರ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೆಲಸ ಪ್ರಗತಿಯಲ್ಲಿರುವಾಗಲೇ ಟೀಕೆ ಮಾಡುವುದು ಸರಿಯಲ್ಲ. ಕೆಲಸ ಮುಗಿದ ಮೇಲೆ ಬೇಕಾದರೆ ಸರಿಯಿಲ್ಲ ಎಂದರೆ ಟೀಕೆ ಮಾಡಲಿ ಎಂದರು.
ರಾಜ್ಯದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.22 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಸಹಿ ಹಾಕಲಾಗಿದೆ. ಈವರೆಗೂ 3.5ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ ಎಂದರು.ನೆರೆ ರಾಜ್ಯಗಳಿಂದ ಉದ್ಯಮಿಗಳು ಕರ್ನಾಟಕದತ್ತ ಮುಖ ಮಾಡಿದ್ದಾರೆ. ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಕೈಗಾರಿಕಾ ವಿರೋಧಿಯಾದ ವಾತಾವರಣವನ್ನು ನಾವು ಸೃಷ್ಟಿಸಿಲ್ಲ ಎಂದರು.
ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಸರ್ಕಾರಿ ಆಸ್ತಿಗಳಲ್ಲಿ ನಿರ್ಬಂಧಿಸಲು ಪತ್ರ ಬರೆದಿರುವ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾರು ಬೆದರಿಕೆ ಹಾಕಿದ್ದಾರೆ ಮತ್ತು ಅದರ ಮೂಲ ಎಲ್ಲಿಯದು ಎಂಬುದನ್ನು ತನಿಖೆ ಮಾಡುತ್ತೇವೆ ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಚಿವರು ತಮ ಅಭಿಪ್ರಾಯಗಳನ್ನು ತಿಳಿಸಿರಬಹುದು. ಆದರೆ, ಸರ್ಕಾರ ಇನ್ನೂ ತನ್ನ ನಿರ್ಧಾರ ತೆಗೆದುಕೊಂಡಿಲ್ಲ. ಕೆಲವರು ಕರೆ ಮಾಡಿ, ಬೆದರಿಕೆ ಹಾಕುತ್ತಿರುವುದನ್ನು ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಾಂತ್ರಿಕತೆಯ ಕಾರಣಕ್ಕೆ ಪತ್ತೆ ಹಚ್ಚಲು ಕಷ್ಟ ಆಗಬಹುದು. ಆದರೆ ಅಸಾಧ್ಯ ಅಲ್ಲ ಎಂದರು.
ಶಾಲೆಗಳಿಗೆ ಹುಸಿಬಾಂಬ್ ಬೆದರಿಕೆ ಹಾಕುವ ಕರೆಗಳನ್ನು ಪತ್ತೆ ಹಚ್ಚುತ್ತೇವೆ. ವಿದೇಶದಲ್ಲಿರುವ ಐಪಿ ಅಡೆ್ರಸ್‌ಗಳನ್ನು ಬಳಸಿಕೊಂಡು ಬೆದರಿಕೆ ಹಾಕಿರುವುದನ್ನೂ ನಾವು ತನಿಖೆ ಮಾಡಿದ್ದೇವೆ. ಇನ್ನು ಭಾರತದ ಒಳಗಿನಿಂದಲೇ ಬೆದರಿಕೆ ಬಂದಿದ್ದರೆ ಕ್ರಮ ಕೈಗೊಳ್ಳುವುದು ಕಷ್ಟವೇನಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕವಾಗಿ ಔತಣಕೂಟ ಆಯೋಜಿಸಿದರು. ಈಗಾಗಲೇ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದೆ. ಬಾಕಿಯಿರುವ ಅವಧಿಯಲ್ಲಿ ಎಲ್ಲರೂ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರ ಹೊರತಾಗಿ ಬೇರೆ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದರು.
ಮರಳು ದಂಧೆಕೋರರು ಯಾದಗಿರಿಯಲ್ಲಿ ಎಎಸ್‌ಐ ಒಬ್ಬರನ್ನು ಅಪಹರಣ ಮಾಡಿ, ಹಲ್ಲೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಘಟನೆ ಬಗ್ಗೆ ವರದಿ ನೀಡುವಂತೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರಿಗೆ ಸೂಚನೆ ನೀಡಿದೇನೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಿಜೆಪಿಯವರು ಪ್ರತಿಯೊಂದು ವಿಚಾರಕ್ಕೂ ಟೀಕೆ ಮಾಡುವುದರಲ್ಲಿ ನಿಸ್ಸೀಮರು. ಅದು ಅವರ ಕರ್ತವ್ಯವೂ ಕೂಡ. ಆದರೆ ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಾ ಹೋದರೆ ಅರ್ಥ ಇರುವುದಿಲ್ಲ. ಸಕಾರಾತಕ ಟೀಕೆ ಮಾಡಲಿ ಎಂದು ಸಲಹೆ ನೀಡಿದರು.