ಬೆಂಗಳೂರು,ಅ.15– ಕಲ್ಯಾಣ ಕರ್ನಾಟಕದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಪಡಿತರ ಅಕ್ಕಿ ಕಳ್ಳಸಾಗಾಣಿಕೆ ದಂಧೆಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲೆಷ್ಟು? ಎಂದು ಸಚಿವ ಪ್ರಿಯಾಂಕ ಖರ್ಗೆಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಡವರಿಗೆ ಸೇರಬೇಕಾದ ಅಕ್ಕಿಯಲ್ಲೂ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ ಮಾಡುತ್ತಿರುವ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಈ ಕಳ್ಳದಂಧೆಯಲ್ಲಿ ನಿಮ ಪಾಲೆಷ್ಟು? ನಿಮ ಪರಮೋಚ್ಛ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಲೆಷ್ಟು? ಎಂದು ಪ್ರಶ್ನಿಸಿದ್ದಾರೆ.
ಪಡಿತರ ಅಕ್ಕಿ ಕಳ್ಳಸಾಗಾಣಿಕೆ ದಂಧೆಯನ್ನು ಸಚಿವ ಪ್ರಿಯಾಂಕ ಖರ್ಗೆ ಅವರೇ ಯಾವಾಗ ನಿಷೇಧ ಮಾಡುತ್ತೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಬಿಡಿಗಾಸಿನ ಯುವನಿಧಿ ಅಲ್ಲ ಸ್ವಾಮಿ. ಶಾಶ್ವತವಾಗಿ ಅನ್ನ ಹಾಕುವ ಉದ್ಯೋಗದ ಗ್ಯಾರಂಟಿ ಕೊಡಿ. ಸಿಎಂ ಹಾಗೂ ಡಿಸಿಎಂ ಅವರೇ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 3 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿ ಮಾಡಿಕೊಂಡು ನಮ ಯುವಕರಿಗೆ ಉದ್ಯೋಗದ ಗ್ಯಾರಂಟಿ ಕೊಡಿ ಸ್ವಾಮಿ ಎಂದು ಒತ್ತಾಯಿಸಿದ್ದಾರೆ.
ಯುವನಿಧಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಯುವಕರ ಮೂಗಿಗೆ ತುಪ್ಪ ಸವರುವ ನಾಟಕ ಸಾಕು. ನಿಮಗೆ ನಿಜವಾಗಿಯೂ ನಾಡಿನ ಯುವಕರ ಭವಿಷ್ಯದ ಬಗ್ಗೆ ಬದ್ಧತೆ ಇದ್ದರೆ, ನೀವು ಹೇಳಿಕೊಳ್ಳುವಂತೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಖಾಲಿ ಇರುವ ಎಲ್ಲಾ 3 ಲಕ್ಷ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಿಕೊಂಡು ಉದ್ಯೋಗದ ಗ್ಯಾರಂಟಿ ಕೊಡಿ ಎಂದು ಆಗ್ರಹಿಸಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ ಬೆಂಗಳೂರಿನ ರಸ್ತೆಗುಂಡಿಗಳ ದುಸ್ಥಿತಿಯ ಬಗ್ಗೆ ಉದ್ಯಮಿಗಳು, ಸಾರ್ವಜನಿಕರು ದನಿ ಎತ್ತಿದರೆ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವಾಸ ತುಂಬುವುದು ಬಿಟ್ಟು ಕಾಂಗ್ರೆಸ್ ಸಚಿವರು, ಅವರ ಮೇಲೆಯೇ ಮುಗಿಬೀಳುತ್ತಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ಅವರೇ, ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಶಿವಕುಮಾರ್ ಅವರು ನೋಡಿದರೆ, ಇದ್ದರೆ ಇರಿ ಇಲ್ಲವೇ ಹೋಗಿ ಎನ್ನುವ ಬೇಜವಾಬ್ದಾರಿ ಮಾತುಗಳ ಮೂಲಕ ಉದ್ಯಮಿಗಳ, ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಸದಾ ಆರ್‌ಎಸ್‌ಎಸ್ ಜಪದಲ್ಲಿ ಬ್ಯುಸಿ ಆಗಿರುವ ಐಟಿ-ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಅವರ ಖಾತೆ ಯಾವುದು? ಅವರ ಜವಾಬ್ದಾರಿ ಏನು? ಎನ್ನುವುದೇ ನೆನಪಿದ್ದಂತಿಲ್ಲ. ಆದರೆ ತಮಂತಹ ಹಿರಿಯ ಅನುಭವಿ ಸಚಿವರಿಂದ ಈ ರೀತಿಯ ಬೇಜವಾಬ್ದಾರಿ ಮಾತುಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಉದ್ಯಮಿಗಳು, ಕೈಗಾರಿಕೆಗಳು ತಾವೇ ರಸ್ತೆ ಗುಂಡಿ ಮುಚ್ಚಬೇಕು ಎನ್ನುವುದಾದರೆ ಅವರು ತೆರಿಗೆ ಯಾಕೆ ಕಟ್ಟಬೇಕು? ಸರ್ಕಾರ ಯಾಕೆ ಇರಬೇಕು? ಸಚಿವರು ಯಾಕಿರಬೇಕು? ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದ ಪಾಲುದಾರರಾದ ಉದ್ಯಮಿಗಳು, ಸಾರ್ವಜನಿಕರು ಟೀಕೆ ಮಾಡುವುದು ಸಹಜ. ಅದು ಮತದಾರರ ಸಂವಿಧಾನದತ್ತ ಹಕ್ಕು. ಅದನ್ನು ಸಕಾರಾತಕವಾಗಿ ತೆಗೆದುಕೊಂಡು ಸ್ಪಂದಿಸುವುದು ಬಿಟ್ಟು ಈ ರೀತಿ ಬೇಜವಾಬ್ದಾರಿಯ ಮಾತುಗಳನ್ನು ಆಡಿದರೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ. ಇದಕ್ಕೆ ಯಾರು ಕಾರಣ? ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ, ಅಸಮರ್ಥ ಆಡಳಿತ, ಉದ್ಯಮ-ವಿರೋಧಿ ನೀತಿಗಳು.ಇದರಿಂದ ಯಾರಿಗೆ ನಷ್ಟ? ಉದ್ಯೋಗ ಸೃಷ್ಟಿ ಇಲ್ಲದೆ ಕರ್ನಾಟಕದ ಯುವಕರಿಗೆ ನಷ್ಟ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನಾದರೂ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಅನವಶ್ಯಕ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು. ಉದ್ಯಮ-ಸ್ನೇಹಿ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ವರ್ಚಸ್ಸಿಗೆ ಕಳಂಕ ತರದೇ ಉದ್ಯಮ, ಹೂಡಿಕೆಯನ್ನು ಆಕರ್ಷಿಸುವ ಮೂಲಕ ನಮ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವತ್ತ ಗಮನ ಹರಿಸಬೇಕು ಎಂದು ಅಶೋಕ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.