Friday, October 17, 2025
Homeರಾಷ್ಟ್ರೀಯ | Nationalಬೆಂಗಳೂರು ರಸ್ತೆಗುಂಡಿ, ಉದ್ಯಮಗಳ ಸ್ಥಳಾಂತರದ ಬಗ್ಗೆ ಆಂಧ್ರ ಸಚಿವ ನಾರಾ ಲೋಕೇಶ್‌ ಹೊಸ ಬಾಂಬ್‌..!

ಬೆಂಗಳೂರು ರಸ್ತೆಗುಂಡಿ, ಉದ್ಯಮಗಳ ಸ್ಥಳಾಂತರದ ಬಗ್ಗೆ ಆಂಧ್ರ ಸಚಿವ ನಾರಾ ಲೋಕೇಶ್‌ ಹೊಸ ಬಾಂಬ್‌..!

Andhra Pradesh Minister Nara Lokesh on Bengaluru roadblock, relocation of industries..!

ಹೈದರಾಬಾದ್‌,ಅ.16– ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಹಾಳುಬಿದ್ದ ರಸ್ತೆಗಳು, ಸಂಚಾರ ದಟ್ಟಣೆ, ಮೂಲಭೂತ ಸೌಕರ್ಯಗಳ ಕೊರತೆ ಇತ್ಯಾದಿ ಕಾರಣಗಳಿಂದ ಕೆಲವು ಐಟಿಬಿಟಿ ಕಂಪನಿಗಳು ರಾಜ್ಯದಿಂದ ಬೇರೆ ಕಡೆ ಮುಖ ಮಾಡುತ್ತಿವೆ.

ಸಿಲಿಕಾನ್‌ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಪ್ರತಿಷ್ಠಿತ ಐಟಿ ಕಂಪನಿಗಳು ಮೂಲಭೂತ ಸೌಕರ್ಯಗಳ ಕೊರತೆ, ಸಂಚಾರ ದಟ್ಟಣೆ ಹಾಗೂ ನಗರದಲ್ಲಿ ರಸ್ತೆಗಳ ಹಾಳುಬಿದ್ದ ಕಾರಣ ಐಟಿಬಿಟಿ ಕಂಪನಿಗಳು ಕರ್ನಾಟಕದಿಂದ ಕಾಲು ಕೀಳಲು ಮುಂದಾಗಿವೆ.
ಇದರ ನಡುವೆ ಕರ್ನಾಟಕದಲ್ಲಿನ ವೈಫಲ್ಯಗಳನ್ನೇ ಬಂಡವಾಳ ಮಾಡಿಕೊಂಡಿರುವ ನೆರೆಯ ಆಂಧ್ರಪ್ರದೇಶ ರಾಜ್ಯದಲ್ಲಿರುವ ಐಟಿ ಕಂಪನಿಗಳನ್ನು ತನ್ನತ್ತ ಸೆಳೆಯಲು ಮುಂದಾಗಿದೆ.

ಬೆಂಗಳೂರು ಮೂಲದ ನವೋದ್ಯಮಗಳನ್ನು ಆಂಧ್ರಪ್ರದೇಶಕ್ಕೆ ವಿಸ್ತರಿಸುವ ಅಥವಾ ಸ್ಥಳಾಂತರಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್‌ ಬಾಂಬ್‌ ಸಿಡಿಸಿದ್ದಾರೆ.

ನಾವು ಪ್ರತಿ ರೂಪಾಯಿ ಹೂಡಿಕೆಗೂ ಸ್ಪರ್ಧಿಸುತ್ತೇವೆ. ನಾವು ಉದ್ಯೋಗ ಸೃಷ್ಟಿ ಮತ್ತು ಉತ್ತಮ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಿದ್ದೇವೆ. ಬಲವಾದ ಮೂಲಭೂತ ಸೌಕರ್ಯ, 24*7 ವಿದ್ಯುತ್‌ ಸರಬರಾಜು ಅನಂತಪುರದಲ್ಲಿರುವ ಕಿಯಾ ಕೇಂದ್ರದಂತಹ ಅಭಿವೃದ್ಧಿ ಹೊಂದುತ್ತಿರುವ ಕ್ಲಸ್ಟರ್‌ಗಳಿಂದ ಬೆಂಬಲಿತವಾಗಿದೆ. ಆಂಧ್ರಪ್ರದೇಶಕ್ಕೆ ವಿಸ್ತರಣೆ ಅಥವಾ ಸ್ಥಳಾಂತರವನ್ನು ಅನ್ವೇಷಿಸುವ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಇಂಟರ್ನೆಟ್‌ ದೈತ್ಯ ಗೂಗಲ್‌ ಮೆಗಾ ಡೇಟಾ ಮತ್ತು ಐಟಿ ಹಬ್‌ಗಾಗಿ 15 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಆಂಧ್ರಪ್ರದೇಶದ ವಿಶಾಖಪಟ್ಟಣವನ್ನು ಆಯ್ಕೆ ಮಾಡಿದ ನಂತರ ಮತ್ತಷ್ಟು ಉದ್ಯಮಗಳ ಆಕರ್ಷಿಸುವ ಕೆಲಸ ಕೂಡ ಭರದಿಂದ ಸಾಗಿದೆ.

ಈ ಬಗ್ಗೆಯೂ ಮಾತನಾಡಿರುವ ನಾರಾ ಲೋಕೇಶ್‌, ಅವರು (ಕರ್ನಾಟಕ ಸರ್ಕಾರ) ಅಸಮರ್ಥರಾಗಿದ್ದರೆ, ನಾನು ಏನು ಮಾಡಲು ಸಾಧ್ಯ? ಅವರ ಸ್ವಂತ ಕೈಗಾರಿಕೋದ್ಯಮಿಗಳು ಮೂಲಸೌಕರ್ಯ ಕೆಟ್ಟದಾಗಿದೆ ಎಂದು ಹೇಳುತ್ತಿದ್ದಾರೆ. ವಿದ್ಯುತ್‌ ಕಡಿತ, ಮೂಲಭೂತ ಸೌಕರ್ಯ ಕೊರತೆಗಳಂತಹ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೆ ತಮ ರಾಜ್ಯವು ಈಗಾಗಲೇ 120 ಬಿಲಿಯನ್‌ ಹೂಡಿಕೆಯನ್ನು ಆಕರ್ಷಿಸಿದ್ದು, ಆಂಧ್ರಪ್ರದೇಶದಲ್ಲಿನ ಸುಧಾರಣೆಗಳ ತ್ವರಿತ ವೇಗವು ಕರ್ನಾಟಕದೊಂದಿಗೆ ಸ್ಪರ್ಧಿಸುವಂತೆ ಮಾಡಿದೆ. ಆದಾಗ್ಯೂ ಈ ವೇಗದಿಂದ ಚಿಂತಿತರಾಗಿರುವ ರಾಜ್ಯಗಳು ಪ್ರತಿಕ್ರಿಯಿಸಬೇಕಾಯಿತು. ಅದು ಅವರ ಸವಾಲು ಎಂದು ಕರ್ನಾಟಕ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೆಸರು ಉಲ್ಲೇಖಿಸದೇ ನಾರಾ ಹೇಳಿದ್ದಾರೆ.

ರಾಜ್ಯವು ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ. ನಮ ಡಬಲ್‌-ಎಂಜಿನ್‌ ಸರ್ಕಾರ, ತ್ವರಿತ ಕಾರ್ಮಿಕ ಸುಧಾರಣೆಗಳು ಮತ್ತು ಬುಲೆಟ್‌ ಟ್ರೈನ್‌ ವೇಗದಲ್ಲಿ ಅಭಿವೃದ್ಧಿಯನ್ನು ಚಾಲನೆ ಮಾಡುವ ಬಲವಾದ ಕೇಂದ್ರ-ರಾಜ್ಯ ಸಮನ್ವಯಕ್ಕೆ ಮನ್ನಣೆ ನೀಡುತ್ತಿದೆ. ವಿಶಾಖಪಟ್ಟಣಂನಲ್ಲಿರುವ ಗೂಗಲ್‌ನ 15 ಬಿಲಿಯನ್‌ ಡಾಲರ್‌ ಡೇಟಾ ಸೆಂಟರ್‌ ಅಮೆರಿಕದ ಹೊರಗೆ ಭಾರತದ ಅತಿದೊಡ್ಡ ಯೋಜನೆಯಾಗಿದೆ ಮತ್ತು 1.8 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿರುವ ಎಚ್‌ಎಎಲ್‌ ಉತ್ಪಾದನಾ ಘಟಕವನ್ನು ಕೂಡ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಉತ್ಸಾಹ ತೋರಿತ್ತು. ಇದಕ್ಕೆ ಎಲ್ಲಡೆ ವಿರೋಧ ಕೇಳಿಬಂದಿದ್ದರಿಂದ ತಣ್ಣಗಾಗಿತ್ತು. ಇನ್ನು ಮಂಗಳವಾರವಷ್ಟೇ ರೈತರ ವಿರೋಧದ ಕಾರಣಕ್ಕೆ ದೇವನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಏರೋಸ್ಪೇಸ್‌‍ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ರದ್ದು ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಘೋಷಿಸಿದ್ದರು. ಇದನ್ನು ರೈತರು ಸಂಭ್ರಮಿಸುತ್ತಿರುವಾಗಲೇ ಆಂಧ್ರಪ್ರದೇಶದ ಸಚಿವರ ಕಣ್ಣು ಕರ್ನಾಟಕದ ಉದ್ಯಮಗಳ ಮೇಲೆ ಬಿದ್ದಿದೆ.

ಈ ಬಗ್ಗೆ ಸಚಿವ ನಾರಾ ಲೋಕೇಶ್‌ ಎಕ್‌್ಸನಲ್ಲಿ ಬಹಿರಂಗವಾಗಿ ಉದ್ಯಮಿಗಳನ್ನು ಆಹ್ವಾನಿಸಿದ್ದರು. 1,777 ಎಕರೆಯಷ್ಟು ಜಮೀನು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡು ಅಲ್ಲಿ ಏರೋಸ್ಪೇಸ್‌‍ ಪ್ರಾರಂಭಿಸಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಆದರೆ ಇದನ್ನು ವಿರೋಧಿಸಿ ರೈತರು, ರೈತ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದ್ದವು.

ಯಾವ ಕಾರಣಕ್ಕೂ ಭೂಮಿ ಕೊಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಸರ್ಕಾರದ ವಿರುದ್ಧ ದಂಗೆ ಎದ್ದ ಕಾರಣ ಕೊನೆಗೂ ಮಣಿದ ಸರ್ಕಾರ, ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಸಚಿವ ತನ್ನ ಅವಕಾಶವಾದಿತನವನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ರೈತರ ವಿರೋಧ, ಸರ್ಕಾರದ ನಿರ್ಧಾರವನ್ನೇ ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳಲು ಹೊರಟಿದ್ದರು.

ಬೆಂಗಳೂರು ಆಂಧ್ರಪ್ರದೇಶದ ಗಡಿಗೆ ಸಮೀಪದಲ್ಲಿರುವುದಿರಂದ ಈ ಭಾಗದಲ್ಲೇ ಏರೋಸ್ಪೇಸ್‌‍ ಉದ್ಯಮಗಳಿಗೆ ನೆಲೆ ನೀಡುವ ಮೂಲಕ ಲಾಭ ಮಾಡಿಕೊಳ್ಳಲು ಆಂಧ್ರ ಕುತಂತ್ರ ಹೆಣೆದಿದೆ. ಈ ಆಹ್ವಾನವನ್ನು ಉದ್ಯಮಿಗಳು ಸ್ವೀಕರಿಸುತ್ತಾರಾ? ಅಥವಾ ಕರ್ನಾಟಕದಲ್ಲೇ ಬೇರೆ ಕಡೆ ಭೂಮಿ ಪಡೆಯುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.

RELATED ARTICLES

Latest News