ಬೆಂಗಳೂರು,ಅ.16- ಕೆಲ ದಿನಗಳವರೆಗೆ ತಣ್ಣಗಾಗಿದ್ದ ಬಿಜೆಪಿಯೊಳಗಿನ ಭಿನ್ನಮತ ಮತ್ತೆ ಚುರುಕುಗೊಂಡಿದ್ದು, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮುಂದುವರೆಸ ದಂತೆ ಕೇಂದ್ರ ವರಿಷ್ಠರಿಗೆ ಒತ್ತಡ ಹಾಕಿದ್ದಾರೆ.
ಬೆಂಗಳೂರಿನಲ್ಲಿರುವ ದಾವಣಗೆರೆಯ ಮಾಜಿ ಸಂಸದ ಜಿ.ಎಂ.ಸಿದ್ಧೇಶ್ವರ ಅವರ ನಿವಾಸದಲ್ಲಿ ಕಳೆದ ರಾತ್ರಿ ದಿಢೀರನೆ ಸಭೆ ಸೇರಿದ ಭಿನ್ನಮತೀಯರು ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸದಂತೆ ಪಟ್ಟು ಹಿಡಿದಿದ್ದಾರೆ.
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್, ಶಾಸಕರಾದ ಬಿ.ಪಿ.ಹರೀಶ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಪ್ರಕಾಶ್ ಖಂಡ್ರೆ, ಶಾಂತರಾಜ್ ಪಾಟೀಲ್, ತುಮ್ಕೋಸ್ ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ವಿಶೇಷವೆಂದರೆ ಮೂರು ದಿನಗಳ ಹಿಂದೆಯಷ್ಟೇ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿಯಾಗಿದ್ದರು. ಇದು ಸಾಕಷ್ಟು ಊಹಾಪೋಹಗಳಿಗೆ, ರಾಜಕೀಯ ವದಂತಿಗಳಿಗೆ ಕಾರಣವಾಗಿತ್ತು.
ಇದರ ಬೆನ್ನಲೇ ಹಲವು ತಿಂಗಳ ನಂತರ ಸಭೆ ಸೇರಿದ ಪ್ರಮುಖರು ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿ ದೆಹಲಿಗೆ ತೆರಳಿ ತಮ ಅಭಿಪ್ರಾಯವನ್ನು ಮಂಡಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ವರಿಷ್ಠರ ಮಧ್ಯಪ್ರವೇಶದ ನಡುವೆಯೂ ದಾವಣಗೆರೆ ಜಿಲ್ಲೆಯ ಬಿಜೆಪಿ ಬಿಕ್ಕಟ್ಟು ಬಗೆಹರಿದಿಲ್ಲ. ಇತ್ತೀಚೆಗೆ ಎರಡು ಬಣಗಳ ಜೊತೆ ವರಿಷ್ಠರು ಸಂಧಾನ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಗೊತ್ತಾಗಿದೆ.
ಮೂಲಗಳ ಪ್ರಕಾರ ಸಭೆಯಲ್ಲಿ ಬಿಜೆಪಿಯ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಇನ್ನೊಂದು ಅವಧಿಗೆ ಮುಂದುವರೆಸುವುದಕ್ಕೆ ನೇರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯಾರೊಬ್ಬರನ್ನು ವಿಶ್ವಾಸಕ್ಕೂ ತೆಗೆದುಕೊಳ್ಳುತ್ತಿಲ್ಲ. ಎಲ್ಲವೂ ಧವಳಗಿರಿಯಿಂದಲೇ ನಿರ್ಧಾರವಾಗುತ್ತವೆ. ಹಿರಿಯರನ್ನು ಸಹ ಪರಿಗಣಿಸುವುದಿಲ್ಲ. ಹೀಗಾಗಿ ಅವರನ್ನು ಮುಂದುವರೆಸದೆ ಬೇರೊಬ್ಬರಿಗೆ ಅವಕಾಶ ನೀಡಬೇಕೆಂದು ವರಿಷ್ಠರಿಗೆ ಮನವಿ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಆದಷ್ಟು ಶೀಘ್ರ ದೆಹಲಿಗೆ ತೆರಳಿ ವಿಜಯೇಂದ್ರ ಮುಂದುವರೆಸುವುದು ಬೇಡ. ಆರ್‌ಎಸ್‌ಎಸ್ ಹಿನ್ನೆಲೆ ಹಾಗೂ ಸಂಘಪರಿವಾರ ಸಂಪರ್ಕವಿರುವ ಪ್ರಮುಖರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಂತೆ ಮನವಿ ಮಾಡುವ ಒಮತಕ್ಕೆ ಬರಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಮುಲಾಜಿಲ್ಲದೆ ಉಚ್ಛಾಟನೆ ಮಾಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಶಾಮೀಲಾಗಿರುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಪಕ್ಷ ವಿರೋಧಿ ಚಟುವಟಿಕೆ ಯಾರೇ ನಡೆಸಿದರೂ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ವರಿಷ್ಠರಿಗೆ ಒತ್ತಾಯಿಸಿದ್ದಾರೆ.
ನೇರವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೆಸರು ಹೇಳದೆ ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡವರನ್ನು ಪಕ್ಷದಿಂದ ಹೊರ ಹಾಕಬೇಕು. ಇದನ್ನು ಸಹ ವರಿಷ್ಠರ ಗಮನಕ್ಕೆ ತರಬೇಕೆಂದು ಸಭೆ ತೀರ್ಮಾನಿಸಿದೆ.
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ವರಿಷ್ಠರು ಕರ್ನಾಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನಾದರೂ ನೇಮಕ ಮಾಡಬಹುದು. ನಾವು ಮೌನಕ್ಕೆ ಜಾರಿದರೆ ವಿರೋಧಿ ಬಣ ಪ್ರಬಲವಾಗುತ್ತದೆ. ಅದಕ್ಕೆ ಅವಕಾಶ ಕೊಡದೆ ನಮ ಅಸ್ತಿತ್ವ ಉಳಿಯಬೇಕೆಂದರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದನ್ನು ವಿರೋಧಿಸಬೇಕು. ಇದಕ್ಕಾಗಿ ನಮ ವೈಮನಸ್ಯ ಮರೆತು ಒಂದಾಗೋಣ ಎಂದು ಸಭೆಯಲ್ಲಿ ನಿರ್ಣಯ ಮಾಡಿದ್ದಾಗಿ ತಿಳಿದುಬಂದಿದೆ.