ಬೆಂಗಳೂರು, ಅ.18- ಆರ್‌ಎಸ್‌ಎಸ್ ವಿರುದ್ಧ ಧ್ವನಿ ಎತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಒಬ್ಬಂಟಿಗರನ್ನಾಗಿ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದರು ಎನ್ನಲಾಗಿದೆ. ಸಂಘ ಪರಿವಾರ ವಿರುದ್ಧ ಹೋರಾಟ ನಡೆಸುವ ವಿಚಾರವಾಗಿ ಒಗ್ಗಟ್ಟು ಕಂಡು ಬರುತ್ತಿಲ್ಲ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರ ಆಧರಿಸಿ, ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಣಯಕೈಗೊಂಡಿದೆ. ಆದರೆ, ಪ್ರಿಯಾಂಕ್ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಗಳ ವಿಚಾರವಾಗಿ ಯಾವ ಸಚಿವರೂ ಬಾಯಿಬಿಡುತ್ತಿಲ್ಲ, ಸರ್ಕಾರ ಮೌನಕ್ಕೆ ಶರಣಾಗಿದೆ ಎಂಬ ಭಾವನೆ ಬರುತ್ತಿದೆ ಎಂದಿರುವುದಾಗಿ ತಿಳಿದು ಬಂದಿದೆ.
ಸಚಿವರಿಗೆ ಕರೆ ಮಾಡಿ, ಬೆದರಿಕೆ ಹಾಕಲಾಗುತ್ತಿದೆ. ಒಬ್ಬ ಸಚಿವರೂ ಕೂಡ ಇದನ್ನು ನೇರವಾಗಿ ಖಂಡಿಸಿಲ್ಲ. ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ ಎಂಬ ಆಕ್ಷೇಪವನ್ನು ಮಲ್ಲಿಕಾರ್ಜುನ್ ಖರ್ಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಬಾರದು, ಚುನಾವಣಾ ಪ್ರಣಾಳಿಕೆಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಬೇಕು. ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕಾರ್ಯಕರ್ತರನ್ನು ಪರಿಗಣಿಸಬೇಕು. ಗುತ್ತಿಗೆದಾರರ ಕಮಿಷನ್ ಆರೋಪದ ಬಗ್ಗೆ ಸ್ಪಷ್ಟವಾದ ಸಮಜಾಯಿಷಿ ನೀಡಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಹಲವು ಬಾರಿ ಸೂಚಿಸಿದ್ದರೂ ಕೂಡ, ಪದೇಪದೇ ಕೆಲವರು ಮಾತನಾಡಿ ಗೊಂದಲಮೂಡಿಸುತ್ತಿದ್ದಾರೆ. ಅಂಥವರಿಗೆ ಕೇವಲ ನೋಟೀಸ್ ಕೊಟ್ಟು, ನೆಪ ಮಾತ್ರದ ವಿವರಣೆ ಪಡೆಯುವ ಬದಲಾಗಿ ಶಿಸ್ತು ಕ್ರಮ ಜಾರಿಗೆ ತನ್ನಿ ಎಂದು ಅಧ್ಯಕ್ಷರು ಆದೇಶಿಸಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರ ಭೇಟಿ ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ. ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ತೆರೆ ಮರೆಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್ ಖರ್ಗೆಯವರನ್ನು ಭೇಟಿಮಾಡಿದ್ದಾರೆ.10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.ಖರ್ಗೆ ಅವರು ಗುಣಮುಖರಾಗಿ ಮನೆಗೆ ಮರಳಿದ ಬಳಿಕವೂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿರಲಿಲ್ಲ. ಇಂದಿನ ಭೇಟಿ ನಾನಾ ರೀತಿಯ ಅನುಮಾನಗಳನ್ನು ಹುಟ್ಟುಹಾಕಿತ್ತು.