ನವದೆಹಲಿ,ಅ.18- ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಅವರಿಗೆ ಭಾರತದ ಪ್ರಧಾನಿ ಹುದ್ದೆ ಅಲಂಕರಿಸುವಷ್ಟು ಅರ್ಹತೆ ಇಲ್ಲ ಎಂದು ಅಮೇರಿಕಾದ ಹೆಸರಾಂತ ಗಾಯಕಿ ಮೇರಿ ಮಿಲ್ಬೆನ್ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರಮೋದಿ ವಿರುದ್ಧ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿರುವ ಅವರು, ಕಾಂಗ್ರೆಸ್ ನಾಯಕನಿಗೆ ಪ್ರಧಾನಿಯಾಗುವಷ್ಟು ಚಾಣಾಕ್ಷತನ ಇಲ್ಲ. ಭಾರತದ ಪ್ರಧಾನಿಯಾಗುವಷ್ಟು ಕುಶಾಗ್ರಮತಿ ನಿಮಲ್ಲಿ ಇಲ್ಲದಿರುವುದರಿಂದ ಈ ರೀತಿಯ ನಾಯಕತ್ವವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ.
ನಾನು ಇದನ್ನು ನಿರೀಕ್ಷಿಸುವುದಿಲ್ಲ. ನಿಮ ಐ ಹೇಟ್ ಇಂಡಿಯಾ ಪ್ರವಾಸಕ್ಕೆ ಹಿಂತಿರುಗುವುದು ಉತ್ತಮ ಎಂದು ವ್ಯಂಗ್ಯಭರಿತವಾಗಿ ತಮ ಸಾಮಾಜಿಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಆಗಾಗ್ಗೆ ಹೊಗಳುವ ಮಿಲ್ಬೆನ್, ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಬಗ್ಗೆ ಭಯಭೀತರಾಗಿದ್ದಾರೆ ಎಂಬ ರಾಹುಲ್ ಗಾಂದಿ ಅವರ ಆರೋಪಕ್ಕೆ ಕೆಂಡಮಂಡಲವಾಗಿದ್ದಾರೆ.
ಭಾರತವು ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ನಿರ್ಧರಿಸಲು ಮತ್ತು ಘೋಷಿಸಲು ಪ್ರಧಾನಿ ಅನುಮತಿಸುತ್ತಾರೆ, ಪದೇ ಪದೇ ಕಡೆಗಣಿಸಲ್ಪಟ್ಟಿದ್ದರೂ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ ಮತ್ತು ಆಪರೇಷನ್ ಸಿಂಧೂರ್ ಬಗ್ಗೆ ಅಮೆರಿಕ ಅಧ್ಯಕ್ಷರನ್ನು ವಿರೋಧಿಸುವುದಿಲ್ಲ ಎಂಬುದು ರಾಹುಲ್ ಅರೋಪವಾಗಿದೆ.
ಇದಕ್ಕೆ ಅಮೆರಿಕದ ಗಾಯಕಿ, ಪ್ರಧಾನಿ ಮೋದಿವರು ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ದೀರ್ಘಕಾಲದ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದಾರೆ. ಅಮೆರಿಕದೊಂದಿಗಿನ ಅವರ ರಾಜತಾಂತ್ರಿಕತೆಯು ಕಾರ್ಯತಂತ್ರದ್ದಾಗಿದೆ. ಡೊನಾಲ್ಡ್ ಟ್ರಂಪ್ ಯಾವಾಗಲೂ ಅಮೆರಿಕದ ಹಿತಾಸಕ್ತಿಗಳನ್ನು ಮೊದಲು ಇಡುವಂತೆಯೇ, ಪ್ರಧಾನಿ ಮೋದಿ ಅವರು ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ನಾನು ಅದನ್ನು ಶ್ಲಾಘಿಸುತ್ತೇನೆ. ರಾಷ್ಟ್ರಗಳ ಮುಖ್ಯಸ್ಥರು ಅದನ್ನೇ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ನಟಿ ಮತ್ತು ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮಿಲ್ಬೆನ್, ಜೂನ್ 2023ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅವರನ್ನು ಮೊದಲು ಭೇಟಿಯಾಗಿದ್ದರು. ರೊನಾಲ್‌್ಡ ರೇಗನ್ ಕಟ್ಟಡದಲ್ಲಿ ಅವರು ಭಾರತದ ರಾಷ್ಟ್ರಗೀತೆಯನ್ನು ಪ್ರದರ್ಶಿಸಿದರು, ನಂತರ ಅವರು ಪ್ರಧಾನಿ ಮೋದಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಈ ಕ್ಷಣವು ವಿಶ್ವದಾದ್ಯಂತ ಗಮನ ಸೆಳೆದಿತ್ತು.
ಟ್ರಂಪ್ ಹೇಳಿಕೆ: ರಾಹುಲ್ ಗಾಂಧಿಯವರ ಹೇಳಿಕೆಗೆ ಮೂಲ ಕಾರಣ, ಡೊನಾಲ್‌್ಡ ಟ್ರಂಪ್ ಅವರು ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದು. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಮಾಸ್ಕೋ ಮೇಲೆ ಒತ್ತಡ ಹೆಚ್ಚಿಸಲು ಇದು ಒಂದು ದೊಡ್ಡ ಹೆಜ್ಜೆ ಎಂದು ಟ್ರಂಪ್ ಬಣ್ಣಿಸಿದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಸರ್ಕಾರವನ್ನು ಟೀಕಿಸಿದ್ದು, ಭಾರತ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮೊದಲು ಘೋಷಿಸಿದರು. ತಮ ಒತ್ತಡದ ಮೇರೆಗೆ ಭಾರತ ಕಾರ್ಯನಿರ್ವಹಿಸಿದೆ ಎಂದು ಟ್ರಂಪ್ ಪದೇ ಪದೇ ಹೇಳಿಕೊಂಡಿದ್ದಾರೆ ಎಂಬುದನ್ನು ಹೈಲೈಟ್ ಮಾಡಿದ್ದಾರೆ.
ತಮ ಓವಲ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಟ್ರಂಪ್, ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದು ಅಮೆರಿಕಕ್ಕೆ ಸಂತೋಷದ ವಿಷಯವಲ್ಲ ಎಂದು ಸ್ಪಷ್ಟಪಡಿಸಿದ್ದರು. ಇಂತಹ ಖರೀದಿಗಳೇ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧಕ್ಕೆ ಹಣಕಾಸು ಸಹಾಯ ಮಾಡಿದೆ ಎಂದು ಟ್ರಂಪ್ ವಾದಿಸಿದ್ದರು. ಮೋದಿ ಹಾಗೂ ನಾನು ಉತ್ತಮ ಸ್ನೇಹಿತರು, ನಮ ನಡುವೆ ಒಳ್ಳೆಯ ಬಾಂಧವ್ಯವಿದೆ. ಅವರು ರಷ್ಯಾದಿಂದ ತೈಲ ಖರೀದಿಸುವುದು ನಮಗೆ ಸಂತೋಷದ ವಿಷಯವಲ್ಲ. ಏಕೆಂದರೆ ಈ ಖರೀದಿ ರಷ್ಯಾದ ಯುದ್ಧಕ್ಕೆ ಅವಕಾಶ ಮಾಡಿಕೊಡುತ್ತದೆ, ಈ ಯುದ್ಧದಿಂದ ಒಂದೂವರೆ ಮಿಲಿಯನ್ ಜನರನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು.
ಭಾರತ ತೈಲ ಖರೀದಿಸುತ್ತಿರುವುದು ನನಗೆ ಸಂತೋಷವಾಗಿರಲಿಲ್ಲ, ಮತ್ತು (ಮೋದಿ) ಇಂದು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಭರವಸೆ ನೀಡಿದರು. ಇದೊಂದು ಮಹತ್ವದ ಹೆಜ್ಜೆ. ಈಗ ನಾವು ಚೀನಾವನ್ನು ಕೂಡ ಇದೇ ನಿರ್ಧಾರ ಕೈಗೊಳ್ಳುವಂತೆ ಮಾಡಬೇಕಿದೆ ಎಂದು ಟ್ರಂಪ್ ತಿಳಿಸಿದ್ದರು.
ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ (ಸಿಆರಿಎ) ಪ್ರಕಾರ, ಚೀನಾದ ನಂತರ ಭಾರತವು ರಷ್ಯಾದ ಪಳೆಯುಳಿಕೆ ಇಂಧನಗಳ ಎರಡನೇ ಅತಿದೊಡ್ಡ ಖರೀದಿದಾರನಾಗಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಯುರೋಪಿಯನ್ ಬೇಡಿಕೆಯಲ್ಲಿನ ಇಳಿಕೆಯಿಂದಾಗಿ ರಷ್ಯಾದ ತೈಲವು ಭಾರೀ ರಿಯಾಯಿತಿಯಲ್ಲಿ ಲಭ್ಯವಾಯಿತು.
ಇದರ ಪರಿಣಾಮವಾಗಿ,ಭಾರತದ ರಷ್ಯಾದ ಕಚ್ಚಾ ತೈಲ ಆಮದು ಅಲ್ಪಾವಧಿಯಲ್ಲಿಯೇ ಶೇಕಡಾ 1 ಕ್ಕಿಂತ ಅದರ ಒಟ್ಟು ಕಚ್ಚಾ ತೈಲ ಆಮದಿನ ಶೇಕಡಾ 40ಕ್ಕೆ ಏರಿತು. ತನ್ನ ತೈಲ ಆಮದುಗಳನ್ನು ರಾಷ್ಟ್ರೀಯ ಇಂಧನ ಭದ್ರತೆ ಮತ್ತು ಕೈಗೆಟಕುವ ದರ ಲಭ್ಯತೆಗಳಿಂದ ನಡೆಸಲಾಗುತ್ತಿದೆ ಹಾಗೂ ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ತನ್ನ ನಿಲುವು ಸ್ವತಂತ್ರ ಮತ್ತು ಸಮತೋಲಿತವಾಗಿದೆ ಎಂದು ಭಾರತ ಸರ್ಕಾರ ಸಮರ್ಥಿಸಿಕೊಂಡಿದೆ.