ಬೆಂಗಳೂರು,ಅ.18- ಮನೆಯೊಂದರಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಿವೃತ್ತ ಯೋಧ ಗಂಭೀರ ಗಾಯಗೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಗಾಯಗೊಂಡಿರುವ ನಿವೃತ್ತ ಯೋಧ ಜನಾರ್ಧನ್ (60) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮೂಲತಃ ಮಡಿಕೇರಿಯವರು.
ಅಂಧ್ರಹಳ್ಳಿಯ ವಿದ್ಯಾಮಾನ್ಯ ಲೇಔಟ್‌ನಲ್ಲಿ ರುದ್ರೇಗೌಡ ಎಂಬುವವರ ಬಾಡಿಗೆ ಮನೆಯಲ್ಲಿ ಜನಾರ್ಧನ್ ಅವರು ಒಬ್ಬರೇ ವಾಸವಾಗಿದ್ದಾರೆ. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರುವುದು ಇವರ ಗಮನಕ್ಕೆ ಬಂದಿಲ್ಲ. ರಾತ್ರಿ 8.30ರ ಸುಮಾರಿನಲ್ಲಿ ಜನಾರ್ಧನ್ ಅವರು ಅಡಿಗೆ ಮಾಡಲು ಸ್ಟೌವ್ ಆನ್ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದರಿಂದ ಜನಾರ್ಧನ್ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.
ಸ್ಪೋಟದ ರಭಸಕ್ಕೆ ಮನೆಗೋಡೆ ಕುಸಿದು ಬಿದ್ದಿದೆ. ಛಾವಣಿ ಬಿರುಕು ಬಿಟ್ಟಿದೆ. ಸ್ಪೋಟದ ಸುದ್ದಿ ತಿಳಿದು ಅಕ್ಕಪಕ್ಕದವರು ತಕ್ಷಣ ಅಗ್ನಿ ಶಾಮಕದಳಕ್ಕೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.