ಬೆಂಗಳೂರು,ಅ.18-ಪುತ್ತೂರಿನಿಂದ ಎಂಟು ದಿನಗಳ ಹಿಂದೆಯಷ್ಟೆ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದು ಲಾಡ್ಜ್ ನಲ್ಲಿ ತಂಗಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪುತ್ತೂರಿನ ತಕ್ಷಿತ್ (20) ಮೃತಪಟ್ಟಿರುವ ಯುವಕ.
ಮಡಿಕೇರಿ ಜಿಲ್ಲೆ ವಿರಾಜಪೇಟೆಯ ಸ್ನೇಹಿತೆಯೊಂದಿಗೆ ಪುತ್ತೂರಿನಿಂದ ತಕ್ಷಿತ್ ನಗರಕ್ಕೆ ಬಂದು ಮಡಿವಾಳದ ಮಾರುತಿನಗರದ ಗ್ರ್ಯಾಂಡ್ ಚಾಯ್ಸ್ ಹೊಟೇಲ್‌ನಲ್ಲಿ ತಂಗಿದ್ದರು. ಇವರಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಮೊನ್ನೆ ರಾತ್ರಿ ಯುವತಿ ಊರಿಗೆ ವಾಪಸ್ ಹೋಗಿದ್ದಾಳೆ. ಹಾಗಾಗಿ ರೂಮ್‌ನಲ್ಲಿ ಆತ ಒಬ್ಬನೇ ಇದ್ದನು. ಎಂಟು ದಿನಗಳ ಕಾಲ ಊಟ, ತಿಂಡಿಯನ್ನು ತಮ ರೂಮ್‌ಗೆ ತರಿಸಿಕೊಂಡಿದ್ದಾರೆ. ನಿನ್ನೆ ರೂಮ್‌ನಿಂದ ಯಾರೂ ಹೊರ ಬರದಿದ್ದಾಗ ಅನುಮಾನಗೊಂಡು ಸಿಬ್ಬಂದಿ ಸಂಜೆ ಬಾಗಿಲು ತೆಗೆದು ನೋಡಿದಾಗ ಹಾಸಿಗೆ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಯುವಕ ಮೃತಪಟ್ಟಿರುವುದು ಕಂಡು ಬಂದಿದೆ.
ತಕ್ಷಣ ಲಾಡ್‌್ಜ ನವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರೂಮ್ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಆತನ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ಯುವಕನ ಪೋಷಕರು ಹಾಗೂ ತಕ್ಷಿತ್ ಜೊತೆ ಇದ್ದ ಯುವತಿ ಸಹ ನಗರಕ್ಕೆ ಬಂದಿದ್ದಾರೆ. ಈತನಿಗೆ ಅನಾರೋಗ್ಯ ಸಮಸ್ಯೆ ಇತ್ತು. ಅಲ್ಲದೇ ಸಿಗರೇಟ್ ಹೆಚ್ಚಾಗಿ ಸೇದುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದ್ದು, ಸಾವು ಹೇಗಾಗಿದೆ ಎಂಬುವುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.