ಬೆಂಗಳೂರು, ಅ.18- ವಾರಾಂತ್ಯ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಬಂದಿದ್ದು, ರಾಜಧಾನಿಯಲ್ಲಿ ನೆಲೆಸಿರುವ ಜನರು ಕುಟುಂಬ ಸಮೇತರಾಗಿ ಊರು, ದೇವಸ್ಥಾನ ಹಾಗೂ ಪ್ರವಾಸಕ್ಕೆ ತೆರಳುತ್ತಿದ್ದು, ಬಸ್ ಹಾಗೂ ರೈಲ್ವೆ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.
ನಿನ್ನೆ ಸಂಜೆಯಿಂದಲೇ ಜನರು ಊರುಗಳತ್ತ ತೆರಳುತ್ತಿದ್ದು, ಮೆಜೆಸ್ಟಿಕ್‌ನಲ್ಲಿ ಭಾರೀ ಜನಸಂಖ್ಯೆ ಕಂಡುಬಂತು. ಇಂದು-ನಾಳೆ ವಾರಾಂತ್ಯದ ರಜೆ. ಸೋಮವಾರ ನರಕ ಚತುರ್ದಶಿ, ಮಂಗಳವಾರ ಲಕ್ಷ್ಮೀಪೂಜೆ, ಬುಧವಾರ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಬಂದಿದ್ದು, ಜನರು ಊರುಗಳತ್ತ ಮುಖ ಮಾಡುತ್ತಿದ್ದಾರೆ.
ಹುಬ್ಬಳ್ಳಿ, ಧಾರವಾಡ, ರಾಯಚೂರು, ಬೆಳಗಾವಿ, ಹಾಸನ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಸೇರಿದಂತೆ ಹೊರರಾಜ್ಯಗಳಾದ ತಮಿಳುನಾಡು, ಕೇರಳ, ಗೋವಾ, ಪಾಂಡಿಚೇರಿ ಸೇರಿದಂತೆ ಮತ್ತಿತರೆಡೆಗೆ ಜನರು ಪ್ರಯಾಣ ಬೆಳೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾತ್ರಿ ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಜನದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಆಗಿತ್ತು. ಗೊರಗುಂಟೆಪಾಳ್ಯ, ಯಶವಂತಪುರ, ಜಾಲಳ್ಳಿ ಕ್ರಾಸ್, 8ನೆ ಮೈಲಿ, ಮೈಸೂರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು. ಸಂಚಾರ ಸುಗಮಗೊಳಿಸಲು ಸಂಚಾರಿ ಪೊಲೀಸರು ಹರಸಾಹಸ ಪಡಬೇಕಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿಯಾಗಿ 2500 ಬಸ್‌ಗಳನ್ನು ಬಿಡಲಾಗಿದ್ದು, ಮುಂಗಡವಾಗಿ ಬಹುತೇಕ ಜನರು ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಪ್ರಯಾಣ ಕೂಡ ಬೆಳೆಸಿದ್ದಾರೆ. ಇನ್ನು ದೂರದ ಜಿಲ್ಲೆ ಹಾಗೂ ಹೊರರಾಜ್ಯಗಳ ಪ್ರಯಾಣಿಕರು ರೈಲುಗಳಲ್ಲಿ ತೆರಳುತ್ತಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ರಾತ್ರಿ ಹಾಗೂ ಇಂದು ಬೆಳಗ್ಗೆ ಪ್ರಯಾಣಿಕರು ಹೆಚ್ಚಾಗಿ ಆಗಮಿಸಿದ್ದರು.
ಇದರ ಜತೆಗೆ ಖಾಸಗಿ ಟ್ರಾವೆಲ್‌್ಸಗಳಲ್ಲೂ ಸಹ ಬುಕ್ಕಿಂಗ್ ಮಾಡಿಕೊಂಡಿದ್ದು, ಚಾಲುಕ್ಯ ವೃತ್ತ, ಆನಂದರಾವ್ ವೃತ್ತ, ಮೈಸೂರು ವೃತ್ತ ಸೇರಿದಂತೆ ಬುಕ್ಕಿಂಗ್ ಕೇಂದ್ರಗಳಲ್ಲಿ ಪ್ರಯಾಣಿಕರು ಕಾದು ಕುಳಿತಿದ್ದ ದೃಶ್ಯಗಳು ಕೂಡ ಕಂಡುಬಂದವು.
ಇದರ ಬೆನ್ನಲ್ಲೇ ಹಾಸನಾಂಬ ದರ್ಶ ನೋತ್ಸವವೂ ಸಹ ನಡೆಯುತ್ತಿದ್ದು, ಸಾರಿಗೆ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಕೆಲವರು ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದು, ರಾತ್ರಿ ತುಮಕೂರು ರಸ್ತೆಯ 8ನೆ ಮೈಲಿ ಟೋಲ್, ನೆಲಮಂಗಲ ಟೋಲ್, ಮೈಸೂರು ರಸ್ತೆ ಟೋಲ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.