ಬೆಂಗಳೂರು,ಅ.19- ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆಗೆ ಭಾರೀ ಮುಖಭಂಗವಾಗಿದೆ.
ಇಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ತೀರ್ಮಾನಿಸಿತ್ತು. ಇದೇ ವೇಳೆ ಭೀಮ್ ಆರ್ಮಿ ಕೂಡ ನಗರದಲ್ಲಿ ಮತ್ತೊಂದು ಪಥಸಂಚಲನ ನಡೆಸಲು ನಿರ್ಧರಿಸಿತ್ತು. ಹೀಗೆ ಏಕಕಾಲದಲ್ಲಿ ಎರಡು ಸಂಘಟನೆಗಳು ಪಥಸಂಚಲನ ನಡೆಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಚಿತ್ತಾಪೂರ ತಾಲೂಕು ತಹಶೀಲ್ದಾರ್ ನಾಗಯ್ಯ ಅನುಮತಿ ನಿರಾಕರಿಸಿದ್ದರು.
ತಹಸೀಲ್ದಾರ್ ಅವರ ಆದೇಶವನ್ನು ಪ್ರಶ್ನಿಸಿ ಅಶೋಕ್ ಎಂಬುವರು ಕಲಬುರಗಿ ಸಂಚಾರಿ ಪೀಠಕ್ಕೆ ತುರ್ತು ಅರ್ಜಿ ವಿಚಾರಣೆ ನಡೆಸಲು ಮೇಲನವಿ ಸಲ್ಲಿಸಿದ್ದರು. ಎರಡು ಕಡೆಯ ವಾದ-ವಿವಾದ ಆಲಿಸಿದ ಕಲಬುರಗಿ ಸಂಚಾರಿ ಪೀಠದ ನ್ಯಾಯಾಧೀಶ ಎ.ಜಿ.ಎಸ್.ಕಮಲ್ ಅವರು ನ.2ರಂದು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿದ್ದಾರೆ. ಆದರೆ ಭಾನುವಾರವೇ ಪಥಸಂಚಲನ ನಡೆಸಬೇಕೆಂಬ ಆರ್‌ಎಸ್‌ಎಸ್ ಮನವಿಯನ್ನು ನ್ಯಾಯಾಲಯ ಸಮತಿಸಲಿಲ್ಲ.
ನ.2ರಂದು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿದ ನ್ಯಾಯಾಲಯ, ಕಾನೂನು ಸುವ್ಯವಸ್ಥೆಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ಧಕ್ಕೆಯಾಗಬಾರದೆಂದು ಅರ್ಜಿದಾರರ ಪರ ವಕೀಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದಕ್ಕೆ ಒಪ್ಪಿಗೆ ಸೂಚಿಸಿದ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್, ರಾಜ್ಯದಲ್ಲಿ ಇದುವರೆಗೂ 250ಕ್ಕೂ ಹೆಚ್ಚು ಪಥಸಂಚಲನ ನಡೆಸಲಾಗಿದೆ. ಎಲ್ಲಿಯೂ ಕೂಡ ಶಾಂತಿಸುವ್ಯವಸ್ಥೆಗೆ ಧಕ್ಕೆ ಬಂದಿಲ್ಲ. ಎಲ್ಲಾ ಕಡೆಯೂ ಶಾಂತಿಯುತವಾಗಿ ನಡೆಸಿದ್ದೇವೆ. ಇಲ್ಲಿಯೂ ಕೂಡ ಅದೇ ರೀತಿ ನಡೆಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟರು.
ಪಥಸಂಚಲನ ನಡೆಸಲು ಹೊಸದಾಗಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕೆಂದು ಆದೇಶ ನೀಡಿದ ನ್ಯಾಯಾಧೀಶರು, ಸಾರ್ವಜನಿಕರ ಹಿತ, ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ವಾದ-ಪ್ರತಿವಾದ
ಇದಕ್ಕೂ ಮುನ್ನ ಹೈಕೋರ್ಟ್‌ನಲ್ಲಿ ಕಾವೇರಿದ ವಾದ-ಪ್ರತಿವಾದ ನಡೆಯಿತು. ಆರ್‌ಎಸ್‌ಎಸ್ ಪರವಾಗಿ ಹಿರಿಯ ವಕೀಲ ಅರುಣ್‌ಶ್ಯಾಮ್‌ಹಾಗೂ ಸರ್ಕಾರದ ಪರವಾಗಿ ವಕೀಲ ಶಶಿಕಿರಣ್ ಶೆಟ್ಟಿ ಹಾಜರಾಗಿದ್ದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಅರುಣ್ ಶ್ಯಾಮ್ ಅವರು ಚಿತ್ತಾಪುರದಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ನಾವು ಹಿಂದೆಯೇ ತೀರ್ಮಾನಿಸಿದ್ದೆವು. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಚಿತ್ತಾಪುರ ತಹಸೀಲ್ದಾರ್, ಸರ್ಕಲ್ ಇನ್‌ಸ್ಪೆಕ್ಟರ್‌ಮತ್ತು ಪುರಸಭೆ ಅಧಿಕಾರಿಗಳಿಗೂ ಮನವಿಪತ್ರ ಸಲ್ಲಿಸಲಾಗಿತ್ತು.
ಆದರೆ ತಹಸೀಲ್ದಾರ್ ಏಕಾಏಕಿ ಅನುಮತಿ ನಿರಾಕರಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದರು. ನಾವು ಯಾರಿಗೂ ತೊಂದರೆಯಾಗದಂತೆ ಪಥಸಂಚಲನ ನಡೆಸುತ್ತೇವೆ. ತಹಸೀಲ್ದಾರ್ ಅವರ ಕ್ರಮ ಸಂವಿಧಾನ ವಿರೋಧಿ ಎಂದು ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು.
ಭೀಮ್ ಆರ್ಮಿ ಅವರಿಗೆ ಪಥಸಂಚಲನ ನಡೆಸಲು ಅವಕಾಶ ಕೊಡಬೇಡಿ ಎಂದು ಹೇಳುವುದಿಲ್ಲ. ಅನುಮತಿ ಪಡೆದುಕೊಂಡು ಅವರು ನಡೆಸಲಿ. ಇದಕ್ಕೆ ನಮ ಅಭ್ಯಂತರವಿಲ್ಲ. ಆದರೆ ಅನುಮತಿಯನ್ನು ನಿರಾಕರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಚಿತ್ತಾಪುರದಲ್ಲಿ ಏಕಕಾಲಕ್ಕೆ ಆರ್‌ಎಸ್‌ಎಸ್ ಮತ್ತು ಭೀಮ್ ಆರ್ಮಿಯವರು ಪಂಥಸಂಚಲನ ನಡೆಸಲು ಮುಂದಾಗಿದ್ದಾರೆ. ಆದರೆ ಏಕಕಾಲಕ್ಕೆ ಎರಡು ಸಂಘಟನೆಗಳು ಒಂದೇ ಮಾರ್ಗದಲ್ಲಿ ಸಾಗಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಹೀಗಾಗಿ ತಹಸೀಲ್ದಾರ್ ಅವರು ಅನುಮತಿ ನಿರಾಕರಿಸಿದ್ದಾರೆ. ಅವರ ಕ್ರಮ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಎರಡು ಸಂಘಟನೆಗಳಿಗೆ ಏಕಕಾಲದಲ್ಲಿ ಅನುಮತಿ ನೀಡಿದರೆ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುವುದಿಲ್ಲ. ದಂಡಾಧಿಕಾರಿಗಳಾಗಿರುವ ತಹಸೀಲ್ದಾರ್ ಅವರು ತಮಗಿರುವ ವಿವೇಚನೆ ಬಳಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಪಥಸಂಚಲನಕ್ಕೆ ಯಾರು ಅನುಮತಿ ಕೊಡಬೇಕು? ಅನುಮತಿ ನೀಡುವ ಪ್ರಾಧಿಕಾರ ಯಾವುದು? ಈ ಬಗ್ಗೆ ಸ್ಪಷ್ಟವಾಗಿ ನಿಯಮಗಳಿವೆಯೇ? ಎರಡು ಸಂಘಟನೆಗಳು ಬೇರೆ ದಿನ ಪಥಸಂಚಲನ ನಡೆಸಲು ಅವಕಾಶ ನೀಡಬಹುದೇ? ಯಾವ ಕಾರಣಕ್ಕಾಗಿ ಪಥಸಂಚಲನ ನಿರಾಕರಿಸಿದ್ದಾರೆ? ಎಂದು ನ್ಯಾಯಾಧೀಶರು ಎಜೆ ಅವರನ್ನು ಪ್ರಶ್ನಿಸಿದರು.
ಈ ಹಂತದಲ್ಲಿ ಅರುಣ್ ಶ್ಯಾಮ್ ಅವರು, ಅವರ ಉದ್ದೇಶವೇ ಪಥಸಂಚಲನ ಹಾಳು ಮಾಡುವುದು. ನಾವು 15 ದಿನ ಮುಂಚಿತವಾಗಿಯೇ ಅನುಮತಿ ಕೇಳಿದ್ದೆವು. ಈಗ ಏಕಾಏಕಿ ನಮಗೂ ಅನುಮತಿ ಕೊಡಿ ಎಂದು ಕೇಳುತ್ತಿದ್ದಾರೆ. 250 ಕಡೆ ಪಥಸಂಚಲನ ನಡೆದ ವೇಳೆ ಎಲ್ಲಿಯೂ ಕಾನೂನು ಉಲ್ಲಂಘನೆಯಾಗಿಲ್ಲ. ಆದರೆ ಇಲ್ಲಿ ಮಾತ್ರ ವಿಚಿತ್ರವಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಅಂತಿಮವಾಗಿ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಎರಡು ಸಂಘಟನೆಗಳಿಗೆ ಪಥಸಂಚಲನ ನಡೆಸಲು ಪ್ರತ್ಯೇಕ ಸಮಯ ನಿಗದಿಪಡಿಸಿ ಎಂದು ಜಿಲ್ಲಾಡಳಿತಕ್ಕೆ ನ್ಯಾಯಾಧೀಶರು ಸೂಚನೆ ನೀಡಿದರು.
ಪ್ರಕರಣದ ಹಿನ್ನೆಲೆ
ಚಿತ್ತಾಪೂರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಗೆ ಜೀವಬೆದರಿಕೆ ಹಾಕಿದ್ದನ್ನು ಖಂಡಿಸಿ ನಡೆಸಲಾಗಿದ್ದ ಬಂದ್ ಮತ್ತು ಪ್ರತಿಭಟನೆಯ ನಡುವೆ, ಆರ್‌ಎಸ್‌ಎಸ್ ಸಂಘಟನೆಯು ನಡೆಸಲು ಯೋಜಿಸಿದ್ದ ಪಥಸಂಚಲನಕ್ಕೆ ತಾಲೂಕು ಆಡಳಿತ ಅನುಮತಿ ನಿರಾಕರಿಸಿತ್ತು.
ಚಿತ್ತಾಪೂರ ತಾಲೂಕು ತಹಶೀಲ್ದಾರ್ ನಾಗಯ್ಯ ಅವರು, ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಅನುಮತಿ ನೀಡಿಲ್ಲ ಎಂದು ಹೇಳಿದ್ದರು.
ಆರ್‌ಎಸ್‌ಎಸ್ ಪಥಸಂಚಲನದ ವಿರುದ್ಧವಾಗಿ ಭೀಮ್ ಆರ್ಮಿ ಸಂಘಟನೆ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘದ ಸದಸ್ಯರು ಅದೇ ಮಾರ್ಗವಾಗಿ ಪಥಸಂಚಲನ ಮಾಡಲು ಅನುಮತಿ ಕೋರಿದ್ದರು.
ಭಾನುವಾರ ಎಲ್ಲಾ ಸಂಘಟನೆಗಳು ಒಂದೇ ಮಾರ್ಗದಲ್ಲಿ ಪಥಸಂಚಲನ ನಡೆಸಿದರೆ ಗೊಂದಲ ಉಂಟಾಗಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಂಘಟನೆಗಳಿಗೆ ಪಥಸಂಚಲನ ಮಾಡಲು ಅನುಮತಿ ನೀಡುವುದಿಲ್ಲ ಎಂದು ತಹಶೀಲ್ದಾರ್ ನಾಗಯ್ಯ ತಿಳಿಸಿದ್ದರು.