ಹಾಸನ, ಅ.19- ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವಕ್ಕೆ ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದ್ದು, ಇಂದು ಸಹ ಭಕ್ತರ ದಂಡೇ ಹರಿದುಬಂದಿತ್ತು.ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆವರೆಗೂ 3.70 ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿಯ ದರ್ಶನ ಪಡೆದಿರುವುದು ಹೊಸ ದಾಖಲೆಯಾಗಿದೆ.
ಇಂದು ಕೂಡ ಭಕ್ತರ ಸಾಗರವೇ ಹರಿದು ಬರುತ್ತಿದ್ದು, ದರ್ಶನದ ನಿರೀಕ್ಷಾ ಅವಧಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಭಕ್ತರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಕೈಗೊಂಡಿದ್ದು, ಮಳೆಯ ಸಾಧ್ಯತೆಯ ಕಾರಣ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ದೀಪಾವಳಿ ನವರಾತ್ರಿ ಉತ್ಸವದ ಭಾಗವಾಗಿ ಹಾಸನಾಂಬ ದರ್ಶನೋತ್ಸವ ಸಹಸ್ರಾರು ಜನರನ್ನು ಆಕರ್ಷಿಸುತ್ತಿದ್ದು, ಇಡೀ ನಗರವನ್ನೆ ಧಾರ್ಮಿಕ ಉತ್ಸವ ಆವರಿಸಿದಂತಾಗಿದೆ.
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ನಡುವೆ ಭಕ್ತರಿಗೆ ದರ್ಶನಕ್ಕೆ ಅಡ್ಡಿಯಾಗದಂತೆ ಜಿಲ್ಲಾಡಳಿತ ಶಿಷ್ಟಾಚಾರ ದರ್ಶನದಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಇದರಿಂದ ಸಚಿವರ ಪತ್ರ ಹಿಡಿದು ಶಿಷ್ಟಾಚಾರದಡಿ ದರ್ಶನಕ್ಕೆ ಬರುವವರಿಗೆ ಬ್ರೇಕ್ ಬಿದ್ದಂತಾಗಿದ್ದು, ಗಣ್ಯರ ಪತ್ರ ತರುವ ಕುಟುಂಬ ಸದಸ್ಯರಿಗೆ ದೇವಿ ದರ್ಶನಕ್ಕೆ ಅವಕಾಶ ಇಲ್ಲವಾಗಿದೆ. ಸಚಿವರ ಜೊತೆಯಲ್ಲಿ ಬರುವವರಿಗೆ ಮಾತ್ರ ಶಿಷ್ಟಾಚಾರ ದರ್ಶನ ಎಂದು ಆದೇಶ ನೀಡುವಂತೆ ಹಾಸನಾಂಬೆ ದೇವಾಲಯ ಆಡಳಿತಾಧಿಕಾರಿ ಮಾರುತಿ ಆದೇಶ ಮಾಡಿದ್ದು, ಸಚಿವರ ಸೂಚನೆಯಂತೆ ಈ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಂಗಳೂರು ಕಡೆಯಿಂದ ಸಾರಿಗೆ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇಂದು ಭಾನುವಾರವಾದ್ದರಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕಿಲೋಮೀಟರ್‌ಗಟ್ಟಲೆ ಧರ್ಮದರ್ಶನದ ಸಾಲು ನಿಂತಿದ್ದು, ದರ್ಶನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ಮೂರರಿಂದ ಮೂರೂವರೆ ಲಕ್ಷ ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಭಕ್ತರನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸವಾಲಾಗಿದೆ.
ಸುಗಮ ದರ್ಶನ ವ್ಯವಸ್ಥೆಗೆ ಎಷ್ಟೇ ಕ್ರಮ ಕೈಗೊಂಡರೂ ಕಷ್ಟಸಾಧ್ಯವಾಗುತ್ತಿದೆ. 300ರೂ. ಹಾಗೂ 1000ರೂ.ಗಳ ಟಿಕೆಟ್ ಪಡೆದವರು ಕೂಡ ದರ್ಶನ ಮಾಡಿ ಬರುವಷ್ಟರಲ್ಲಿ ಹೈರಾಣಾಗಿದ್ದಾರೆ. ದರ್ಶನೋತ್ಸವದ ವೇಳೆ ತೊಂದರೆ ಸಂಭವಿಸಿದರೆ ಪೊಲೀಸ್ ಇಲಾಖೆ ಹೊಣೆಯಲ್ಲ ಎಂದು ಎಸ್‌ಪಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.