ಹಾಸನ, ಅ.19– ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನಾಂಬ ದರ್ಶನಕ್ಕಾಗಿ ಭೇಟಿ ನೀಡಿದ ವೇಳೆಯಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಜೆಡಿಎಸ್ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಹಾಸನಾಂಬ ಮುಖ್ಯ ದ್ವಾರದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಡಳಿತ ವಿರುದ್ಧ ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಲಿಂಗೇಶ್, ಮುಖಂಡರಾದ ಮಂಜೇಗೌಡ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಿನ್ನೆ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಸೇರಿ ಹತ್ತಕ್ಕೂ ಹೆಚ್ಚು ಶಾಸಕರು ಆಗಮಿಸಿದ್ದರು. ಆಗ ಕುಮಾರಸ್ವಾಮಿ ಅವರನ್ನು ಜಿಲ್ಲಾಧಿಕಾರಿಯವರು ಸ್ವಾಗತಿಲಿಲ್ಲ ಎಂಬ ಆರೋಪ ಮಾಡಿದ್ದಾರೆ.
ಹಾಸನಾಂಬ ದೇವಿ ದರ್ಶನ ಮಾಡಿ ಹೊರ ಬಂದಾಗ ಜಿಲ್ಲಾಡಳಿತ ಗೌರವಾರ್ಪಣೆ ಮಾಡಲಿಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಂದಾಗ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಆಡಳಿತಾಧಿಕಾರಿಗಳು ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಸ್ವರೂಪ್ ಪ್ರಕಾಶ್, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬಂದಾಗ ಜಿಲ್ಲಾಡಳಿತ ಗೌರವಿಸಿದೆ. ಆದರೆ, ಎಚ್.ಡಿ.ಕುಮಾರಸ್ವಾಮಿ ಅವರು ಬಂದಾಗ ಅಗೌರವ ಏಕೆ? ಎಂದು ಪ್ರಶ್ನಿಸಿದರು.
ದೇವಾಲಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕಾರಣ. ಕುಮಾರಸ್ವಾಮಿ ಅವರ ಕೊಡುಗೆಯೂ ಇದೆ. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಎರಡು ಕೋಟಿ ರೂ. ಅನುದಾನ ಕೊಡಲಾಗಿತ್ತು. ಗೋಪುರ ನಿರ್ಮಿಸಲಾಗಿದೆ. ಜಿಲ್ಲೆಯ ರೈತರ ಮಗನಾದ ಕುಮಾರಸ್ವಾಮಿ ಅವರು ದೇವಾಲಯಕ್ಕೆ ಬಂದಾಗ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ಶಿಷ್ಟಾಚಾರದಂತೆ ಗೌರವ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮ ದರ್ಶನ ಉತ್ತಮವಾಗಿ ನಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆ ಇದೆ. ವಿಜ್ಞಾನ ಕಾಲೇಜಿನ ಕ್ರೀಡಾಂಗಣ ಹಾಳಾಗಿದೆ. ನನ್ನ ಗಮನಕ್ಕೂ ಬಾರದ ರೀತಿಯಲ್ಲಿ ಅಲ್ಲಿ ಆಹಾರ ಮೇಳ ಮಾಡಿ ಹಾಳು ಮಾಡಿದ್ದಾರೆ. ಅದರ ಉದ್ಘಾಟನೆಗೆ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ. ಈ ರೀತಿಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ ಎಂದು ಅವರು ಹೇಳಿದರು.