ಬೆಂಗಳೂರು, ಅ. 19 ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದ ವಾಶ್ ರೂಮ್‌ನಲ್ಲಿ ಅನಾಮಿಕ ಪ್ರಯಾಣಿಕನೊಬ್ಬ ಬಾಂಬ್ ಎಂದು ಬರೆದಿದ್ದ ಘಟನೆ ಇತರ ಪ್ರಯಾಣಿಕರ ಆತಂಕಕ್ಕೆ ಎಡೆಮಾಡಿತ್ತು.
ಮಧ್ಯರಾತ್ರಿ ನಡೆದ ಘಟನೆಯಲ್ಲಿ, ಒಬ್ಬ ಪ್ರಯಾಣಿಕನು ವಿಮಾನದ ಬಾತ್ ರೂಮ್‌ನಲ್ಲಿ ಬಾಂಬ್ ಎಂದು ಪೆನ್‌ನಿಂದ ಬರೆದಿದ್ದಾನೆ. ಈ ಬರಹವನ್ನು ನೋಡಿದ ಇತರ ವಿಮಾನ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪರಿಶೀಲನೆ ಬಳಿಕ ಆತಂಕ ಪಡುವ ಸಂಗತಿಯಿಲ್ಲವೆಂದು ತಿಳಿದ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟರು.
ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಮಂಗಳೂರಿನ ಬದಲಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಮಧ್ಯರಾತ್ರಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದ್ದು, ಏರ್‌ಪೋರ್ಟ್ ಸುರಕ್ಷತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡರು.
168 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಬಳಿಕ ಸಂಪೂರ್ಣ ವಿಮಾನ ಮತ್ತು ಪ್ರಯಾಣಿಕರ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.ಅಪಾವಿಲ್ಲವೆಂದು ತಿಳಿದ ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಹುಚ್ಚಾಟದಿಂದ ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿ, ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿದ ವ್ಯಕ್ತಿ ಯಾರೆಂದು ಸಧ್ಯಕ್ಕೆ ತಿಳಿದು ಬಂದಿಲ್ಲ. ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.