ಬೆಂಗಳೂರು, ಅ.20-ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ ಕಾಂಗ್ರೆಸ್ ಮಹಾ ದೋಖಾ ಮಾಡುತ್ತಿದೆ. ನೀವು ಹಬ್ಬವನ್ನು ಸಂತೋಷದಿಂದ ಆಚರಿಸಿ, ಕಾಂಗ್ರೆಸ್ ಲೂಟಿಯ ವಿರುದ್ಧ ಜೆಡಿಎಸ್ ಹೋರಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬಿ ಖಾತದಿಂದ ಎ ಖಾತಾ ಮಾಡುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಭೋದಯ ಬೆಂಗಳೂರು, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
ನೀವು ದೀಪ ಹಚ್ಚುತ್ತಿರುವಾಗ, ಕಾಂಗ್ರೆಸ್ ಬಿ ಖಾತಾದಿಂದ ಎ ಖಾತಾ ಮಾಡಲು ಶೇ.5 ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ. 7.5 ಲಕ್ಷ ಮನೆ ಮಾಲೀಕರು 100 ದಿನಗಳಲ್ಲಿ ಲಕ್ಷ ಲಕ್ಷ ಪಾವತಿಸುವಂತೆ ಒತ್ತಾಯಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಇದರ ಬಗ್ಗೆ ಚಿಂತಿಸಬೇಡಿ, ಜೆಡಿಎಸ್ ಪಕ್ಷವು ಪ್ರತಿಯೊಬ್ಬ ಬಿ ಖಾತಾ ಹೊಂದಿರುವವರ ಪರವಾಗಿ ಹೋರಾಡುತ್ತದೆ. ನಾವು ಪ್ರತಿಭಟನೆ ಮೂಲಕ ಮತ್ತು ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತೇವೆ. ನಿಮ ಹಬ್ಬವನ್ನು ಸಂತೋಷದಿಂದ ಆಚರಿಸಿ, ನಾವು ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ. ಈ ಬಗ್ಗೆ ನಾನು ಪೂರ್ಣ ವಿವರಗಳನ್ನು ಗುರುವಾರ ಮಾಧ್ಯಮದ ಮೂಲಕ ತಿಳಿಸುವುದಾಗಿ ಅವರು ಹೇಳಿದ್ದಾರೆ.