ಬೆಂಗಳೂರು,ಅ.20– ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕಾಗಿ ಪಿಡಿಒ ಅಮಾನತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.
ಕೇಂದ್ರ ಸರ್ಕಾರಿ ನೌಕರರು ಆರ್ಎಸ್ಎಸ್ ಪಥಸಂಚಲನ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು 66 ವರ್ಷಗಳ ಹಿಂದೆ ಜಾರಿ ಮಾಡಿದ್ದ ನಿರ್ಬಂಧವನ್ನು ತೆಗೆದು ಹಾಕಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಪ್ರತ್ಯೇಕವಾದ ನಿಯಮಗಳಿರುತ್ತವೆ. ಈ ನಿಯಮಗಳು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಸಹ ಬದಲಾಗುತ್ತವೆ.
ಹಿಂದೆ ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಇದೇ ರೀತಿ ಆರ್ಎಸ್ಎಸ್ ಚಟುವಟಿಕೆಯಲ್ಲಿ ಕಾಣಿಸಿಕೊಂಡಿದ್ದ ಕಾರಣಕ್ಕಾಗಿ ಅಲ್ಲಿನ ಸರ್ಕಾರಗಳು ನೌಕರರನ್ನು ಸೇವೆಯಿಂದ ಅಮಾನತುಪಡಿಸಿತ್ತು.
ಕಳೆದ ಶುಕ್ರವಾರ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ರೋಡಲಬಂಡ ಗ್ರಾಮದ ಪಿಡಿಒ ಪ್ರವೀಣ್ಕುಮಾರ್ ಅವರನ್ನು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪಂಚಾಯತ್ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಅವರು ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಪಡಿಸಿದ್ದರು.
ಅ.12ರಂದು ಲಿಂಗಸಗೂರು ಪಟ್ಟಣದಲ್ಲಿ ಆರ್ಎಸ್ಎಸ್ ಶತಮಾನೋತ್ಸವದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವೀಣ್ಕುಮಾರ್ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಣವೇಷಧಾರಿಯಾಗಿ ಭಾಗಿಯಾಗಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಅವರನ್ನು ಸೇವೆಯಿಂದ ಅಮಾನತುಪಡಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಕಲಬುರಗಿಯ ವಿವಿಧ ಕಡೆ ನಡೆದ ಆರ್ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದೆ ಕೆಲವು ನೌಕರರು ಭಾಗಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದೆ.
ಸೇಡಂ ತಾಲ್ಲೂಕಿನ ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ್ ಮನ್ನೆ ಅವರು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಇದಲ್ಲದೆ ಇನ್ನು ಕೆಲವು ನೌಕರರು ಕೂಡ ಭಾಗಿಯಾಗಿದ್ದರು.
ನಾಲ್ಕು ದಿನಗಳ ಹಿಂದೆ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಸರ್ಕಾರಿ ನೌಕರರು ಖಾಸಗಿ ಸಂಘಸಂಸ್ಥೆಗಳು ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಭಾಗಿಯಾದರೆ ವೃಂದ ಮತ್ತು ನೇಮಕಾತಿಯಡಿ ಅಂಥವರ ವಿರುದ್ದ ಸರ್ಕಾರಿ ಆದೇಶ ಉಲ್ಲಂಘನೆ ಮೇಲೆ ಶಿಸ್ತುಕ್ರಮದ ಬಗ್ಗೆ ಎಚ್ಚರಿಕೆ ಕೊಟ್ಟಿತ್ತು.
ಈಗ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಮೇಲನವಿ ಅರ್ಜಿ ಸಲ್ಲಿಸಲು ಬಿಜೆಪಿ ಮುಂದಾಗಿದೆ. ಆರ್ಎಸ್ಎಸ್ ನೋಂದಾಯಿತ ಸಂಘಸಂಸ್ಥೆಯಲ್ಲ.ನೋಂದಾಯಿತ ಸಂಘಸಂಸ್ಥೆ ಜೊತೆ ಗುರುತಿಸಿಕೊಂಡರೆ ಅಂತಹ ನೌಕರರ ವಿರುದ್ದ ಕ್ರಮ ಜರುಗಿಸಬಹುದು. ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಮೇಲನವಿ ಅರ್ಜಿ ಹಾಕಲು ಸಿದ್ದತೆ ನಡೆದಿದೆ.
ಕಾನೂನು ಹೋರಾಟ
- ಹೈಕೋರ್ಟ್/ಸುಪ್ರೀಂಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಬಹುದು.
ರಾಜ್ಯ ಸರ್ಕಾರ ಈ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು (ಹೈಕೋರ್ಟ್ನಲ್ಲಿ ಆರ್ಟಿಕಲ್ 226 ಅಥವಾ ಸುಪ್ರೀಂ ಕೋರ್ಟ್ನಲ್ಲಿ ಆರ್ಟಿಕಲ್ 32ರಡಿ) ಸಲ್ಲಿಸಲು ಅವಕಾಶವಿದೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ- ಸಂವಿಧಾನದ ಪರಿಚ್ಛೇದ 19(1)(ಎ)ದಡಿಯೂ ಅರ್ಜಿ ಸಲ್ಲಿಸಬಹುದು.ಶಾಂತಿಯುತವಾಗಿ ಸಭೆ ಸೇರುವ ಹಕ್ಕಿನ ಉಲ್ಲಂಘನೆ (ಪರಿಚ್ಛೇದ 19(1)(ಬಿ)ಆರ್ಎಸ್ಎಸ್ ತನ್ನ ದಿನನಿತ್ಯದ ಚಟುವಟಿಕೆಗಳು (ೞಶಾಖೆಗಳುೞ ಅಥವಾ ಸಭೆಗಳಂತೆ) ಶಾಂತಿಯುತ ಸಭೆಗಳಾಗಿವೆ ಮತ್ತು ಸರ್ಕಾರದ ಆದೇಶವು ಈ ಮೂಲಭೂತ ಹಕ್ಕಿಗೆ ಅಸಮಂಜಸ ಅಡಚಣೆಯನ್ನು ಪರಿಣಾಮಕಾರಿಯಾಗಿ ಸೃಷ್ಟಿಸುತ್ತದೆ ಎಂದು ಆರ್ ಎಸ್ಎಸ್ ನ್ಯಾಯಾಲಯದಲ್ಲಿ ವಾದಿಸಬಹುದು.
ಸಂಘಗಳನ್ನು ರಚಿಸುವ ಹಕ್ಕಿನ ಉಲ್ಲಂಘನೆ – ಪರಿಚ್ಛೇದ 19(1)(ಸಿ)
ಆರ್ಎಸ್ಎಸ್ ತನ್ನ ಸದಸ್ಯರನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ನಿಗ್ರಹಿಸಲು ಆದೇಶವನ್ನು ಬಳಸಿದರೆ, ಅದನ್ನು ಸಂಘದ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನವೆಂದು ಪ್ರಶ್ನಿಸಬಹುದು.
ಅನಿಯಂತ್ರಿತತೆ-ತಾರತಮ್ಯ: ಪರಿಚ್ಛೇದ 14- ಸಮಾನತೆಯ ಹಕ್ಕು
ಅನುಮೋದನೆ ಪ್ರಕ್ರಿಯೆ ನಿರಂಕುಶವಾಗಿ ಜಾರಿಗೊಳಿಸಿದರೆ ಅಥವಾ ನಿರ್ದಿಷ್ಟವಾಗಿ ಒಂದು ಸಂಸ್ಥೆಯನ್ನು (ಆರ್ಎಸ್ಎಸ್) ಗುರಿಯಾಗಿಸಿಕೊಂಡು ಜಾರಿಗೊಳಿಸಿದರೆ ಅದು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಆರ್.ಎಸ್.ಎಸ್ ನ್ಯಾಯಾಲಯದಲ್ಲಿ ವಾದಿಸಬಹುದು.
- ಕಾರ್ಯಕಾರಿ ಆದೇಶ/ನಿಯಮಗಳನ್ನು ಪ್ರಶ್ನಿಸುವುದು
ಸರ್ಕಾರಿ ಆದೇಶವು ಸಂಪೂರ್ಣವಾಗಿ ಕಾರ್ಯಾಂಗದ ನಿರ್ಧಾರವಾಗಿದ್ದರೆ, ಕಾರ್ಯಕಾರಿ ಅಧಿಕಾರದ ವ್ಯಾಪ್ತಿಯನ್ನು ಮೀರಿರುವಂಥದ್ದಾಗಿದೆ ಎಂಬ ಆಧಾರದ ಮೇಲೆ ಆರ್ಎಸ್ಎಸ್ ಆ ಆದೇಶವನ್ನು ಪ್ರಶ್ನಿಸಬಹುದು.
ಶಾಸಕಾಂಗದ ಬೆಂಬಲವಿಲ್ಲದೆ ಜಾರಿಗೆ ತರಲಾಗಿರುವ ಕೇವಲ ಅಧಿಕಾರಿಶಾಹಿ ಆದೇಶವು ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸುವ ಉದ್ದೇಶವನ್ನು ಹೊಂದಿದೆ ಅಥವಾ ಆ ಉದ್ದೇಶವು ನ್ಯಾಯಾಲಯಗಳು ನಿಗದಿಪಡಿಸಿರುವ ಚೌಕಟ್ಟಿನಲ್ಲಿಲ್ಲ ಎಂದು ವಾದಿಸಬಹುದು. - ಸರ್ಕಾರಕ್ಕೇ ಮೇಲನವಿ ಸಲ್ಲಿಸಬಹುದು!
ಈಗ ಜಾರಿಯಾಗಿರುವ ಸರ್ಕಾರಿ ಆದೇಶವನ್ನು ಸರ್ಕಾರಕ್ಕೇ ಅರ್ಜಿ ಸಲ್ಲಿಸಿ ಪ್ರಶ್ನಿಸಲು ಅವಕಾಶವಿದೆ. ಇಲ್ಲವೇ ಮುಂದೆ, ಆರ್ಎಸ್ಎಸ್ ಒಂದು ಕಾರ್ಯಕ್ರಮಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿದರೆ ಅದನ್ನು ಸಂಬಂಧಿಸಿದ ಪೊಲೀಸ್ ಇಲಾಖೆಯ ಅಧಿಕಾರಿ ಅಥವಾ ಜಿಲ್ಲಾಡಳಿತ ನಿರಾಕರಿಸಿದರೆ, ಆರ್ಎಸ್ಎಸ್ ಆ ನಿರ್ದಿಷ್ಟ ನಿರಾಕರಣೆಯನ್ನು ಸರ್ಕಾರದ ಮಟ್ಟದಲ್ಲೇ ಪ್ರಶ್ನಿಸಬಹುದು. - ಜನಾಂದೋಲನಗಳ ಮೂಲಕ ನಿರ್ಧಾರ ವಾಪಸ್ಸಿಗೆ ಒತ್ತಡ ಹೇರಬಹುದು
ಮೇಲೆ ತಿಳಿಸಿದಂತೆ ರಾಜ್ಯ ಸರ್ಕಾರದ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಅಥವಾ ಸರ್ಕಾರವನ್ನೇ ಪ್ರಶ್ನಿಸುವುದನ್ನು ಆರ್ಎಸ್ಎಸ್ಗೆ ಪ್ರಶ್ನಿಸಲು ಅವಕಾಶವಿದೆ. ಅದನ್ನು ಹೊರತಪಡಿಸಿ ಮತ್ತೇನು ಮಾಡಬಹುದು ಎಂದರೆ, ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಲು ಅವಕಾಶವಿದೆ.
ಆರ್ಎಸ್ಎಸ್ ತನ್ನ ರಾಜಕೀಯ ಪ್ರಭಾವ ಮತ್ತು ಬೆಂಬಲವನ್ನು (ವಿಶೇಷವಾಗಿ ರಾಜ್ಯದ ವಿರೋಧ ಪಕ್ಷದಿಂದ) ಬಳಸಿಕೊಂಡು ರಾಜ್ಯ ಸರ್ಕಾರವು ಆದೇಶವನ್ನು ಹಿಂತೆಗೆದುಕೊಳ್ಳಲು ಅಥವಾ ಮಾರ್ಪಡಿಸಲು ಒತ್ತಡ ಹೇರಲು ಪ್ರತಿ-ಪ್ರಚಾರಗಳು, ಪ್ರತಿಭಟನೆಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಆನ್ ಲೈನ್ ಮಾಧ್ಯಮದ ಮೂಲಕವೂ ಜನಾಭಿಪ್ರಾಯ ರೂಪಿಸಬಹುದು.