Monday, October 20, 2025
Homeರಾಷ್ಟ್ರೀಯ | Nationalಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿಗಾಗಿ ಆರ್‌ಎಸ್‌‍ಎಸ್‌‍ ಮರು ಅರ್ಜಿ

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿಗಾಗಿ ಆರ್‌ಎಸ್‌‍ಎಸ್‌‍ ಮರು ಅರ್ಜಿ

RSS re-applies for permission to hold a procession in Chittapur

ಕಲಬುರಗಿ, ಅ.20- ಹೈಕೋರ್ಟ್‌ ಆದೇಶದ ಬಳಿಕ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌ 2 ರಂದು ಪಥ ಸಂಚಲನ ನಡೆಸಲು ಅನುಮತಿಗಾಗಿ ಆರ್‌ಎಸ್‌‍ಎಸ್‌‍ ಮರು ಅರ್ಜಿ ಸಲ್ಲಿಸಿದೆ. ಆರ್‌ಎಸ್‌‍ಎಸ್‌‍ನ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್‌ ಪಾಟೀಲ್‌ ಎಂಬುವವರು ಕಲಬುರಗಿ ಜಿಲ್ಲಾಧಿಕಾರಿಗಳ, ಎರಡು ಅಧಿಕೃತ ಇ-ಮೇಲ್‌ ವಿಳಾಸ ಮತ್ತು ವಾಟ್ಸಾಪ್‌ಗೆ ಅರ್ಜಿಯನ್ನು ರವಾನಿಸಿದ್ದು, ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ನಿನ್ನೆ ಚಿತ್ತಾಪುರದಲ್ಲಿ ನಡೆಯಬೇಕಿದ್ದ ಪಥ ಸಂಚಲನಕ್ಕೆ ತಹಶೀಲ್ದಾರ್‌ ಅವರು ಕಡಿವಾಣ ಹಾಕಿದ್ದರು. ಅದನ್ನು ಆರ್‌ಎಸ್‌‍ಎಸ್‌‍ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕಲಬುರಗಿ ವಿಭಾಗದ ಹೈಕೋರ್ಟ್‌ ಪೀಠ, ತುರ್ತು ವಿಚಾರಣೆ ನಡೆಸಿ ನವೆಂಬರ್‌ 2ರಂದು ಪಥ ಸಂಚಲನಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಜೊತೆಗೆ ಅನುಮತಿಗಾಗಿ ಮತ್ತೊಮೆ ಅರ್ಜಿ ಸಲ್ಲಿಸಲು ಆರ್‌ಎಸ್‌‍ಎಸ್‌‍ಗೆ ಸೂಚನೆ ನೀಡಿತ್ತು. ಅದನ್ನು ಆಧರಿಸಿ, ಅಶೋಕ್‌ ಪಾಟೀಲ್‌ ಅವರು ಮರು ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ತಾವು ಮನವಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ನಮನ್ನು ಒಳಗೆ ಬಿಡಲಿಲ್ಲ. ಆಪ್ತ ಸಹಾಯಕರಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು ಕರೆ ಸ್ವೀಕರಿಸಲಿಲ್ಲ, ಹೀಗಾಗಿ ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇವೆ. ವಾಟ್ಸಾಪ್‌ ಮೂಲಕವೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್‌ ಅದೇಶದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಆರ್‌ಎಸ್‌‍ಎಸ್‌‍ ಮುಂದಾಗಿದೆ. ಅಕ್ಟೋಬರ್‌19ರಂದು ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಈ ಮೊದಲು ಅಕ್ಟೋಬರ್‌ 13 ರಂದು ಅಶೋಕ್‌ ಪಾಟೀಲ್‌ ಅವರು ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಚಿತ್ತಾಪುರ ಎಪಿಎಂಸಿ ಯಾರ್ಡ್‌ ಮತ್ತು ಬಸ್‌‍ ನಿಲ್ದಾಣದ ಎದರುಗಡೆಯಿಂದ ಪಥ ಸಂಚಲನ ಆರಂಭಗೊಂಡು ಅಂಬೇಡ್ಕರ್‌ ವೃತ್ತ, ಭುವನೇಶ್ವರಿ ವೃತ್ತ, ಪಾಲಪ್‌ಗಲ್ಲಿ, ಹೋಳಿಕಟ್ಟಿ, ಬಸವೇಶ್ವರ ಚೌಕ, ಹಳೇ ಕಪಡ ಬಜಾರ್‌ ವೃತ್ತ, ಜನತಾಚೌಕ್‌, ನಾಗಾವಿಚೌಕ್‌ನಿಂದ ನಂದಕಿಶೋರ್‌ ಬಜಾಜ್‌ ಮನೆ ಎದರುಗಡೆ ತಿರುಗಿ ಸೇವಾಲಾಲ್‌ ಚೌಕ್‌ ಪುರಸಭೆ ಕಾರ್ಯಾಲಯ ಮುಂಭಾಗ ಹಳೆ ಗಂಜ್‌ ವೃತ್ತ, ಕಾಶೀಗಲ್ಲಿ, ಗಣೇಶ ಮಂದಿರ ಮೂಲಕ ಬಜಾಜ್‌ ಕಲ್ಯಾಣ ಮಂಟಪ ತಲುಪಿ ಸಾರ್ವಜನಿಕ ಸಮಾರಂಭ ಆಯೋಜಿಸಿರುವುದಾಗಿ ತಿಳಿಸಲಾಗಿತ್ತು. ಈ ಮಾರ್ಗಗಳಲ್ಲಿ ಸ್ಚಚ್ಛ ಮಾಡಿಕೊಡಬೇಕು ಹಾಗೂ ಬ್ಯಾನರ್‌ ಬಟಿಂಗ್‌್ಸಗಳನ್ನು ಕಟ್ಟಲು ಅವಕಾಶ ನೀಡಬೇಕು ಎಂದು ಕೋರಲಾಗಿತ್ತು.

ಚಿತ್ತಾಪುರ ತಹಶೀಲ್ದಾರ್‌ ಅವರು ಪಥ ಸಂಚಲನ ನಡೆಸುವ ಉದ್ದೇಶ, ಭಾಗವಹಿಸುವವರ ಹೆಸರು ಮತ್ತು ಈ ಸಂದರ್ಭದಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆಯಾದರೆ ಅದರ ಜವಬ್ದಾರಿ ಹೊರುವ ಹೊಣೆಗಾರಿಕಾ ಪ್ರಮಾಣ ಪತ್ರ ಮತ್ತು ಪಥ ಸಂಚಲನ ಆಯೋಜಿಸುವ ಸಂಸ್ಥೆಯ ನೋಂದಣಿ ದಾಖಲಾತಿ ಪತ್ರಗಳನ್ನು ಒದಗಿಸುವಂತೆ ಸೂಚಿಸಿದರು.

ಅದ್ಯಾವುದನ್ನು ನೀಡದ ಕಾರಣ ತಹಶೀಲ್ದಾರ್‌ ನಾಗಯ್ಯ ಹಿರೇಮಠ್‌ ಪಥ ಸಂಚಲನಕ್ಕೆ ಅನುಮತಿಯನ್ನು ನಿರಾಕರಿಸಿದರು. ಹೈಕೋರ್ಟ್‌ನಲ್ಲಿ ವಾದ-ವಿವಾದದ ಬಳಿಕ ಎರಡನೇ ಅರ್ಜಿ ಸಲ್ಲಿಕೆಯಾಗಿದೆ. ನಿನ್ನೆ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಆರ್‌ಎಸ್‌‍ಎಸ್‌‍ ಮತ್ತೊಮೆ ಅರ್ಜಿ ಸಲ್ಲಿಸಿ ಷರತ್ತುಗಳನ್ನು ಪೂರೈಸಿದರೆ ಪಥ ಸಂಚಲನಕ್ಕೆ ಅನುಮತಿ ನೀಡುವ ಬಗ್ಗೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಹೈ ಕೋರ್ಟ್‌ ಆದೇಶದ ಬೆನ್ನಲ್ಲೇ ಆರ್‌ಎಸ್‌‍ಎಸ್‌‍ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದೆ.

ಈ ನಡುವೆ ನಿನ್ನೆ ಸೇಡಂನಲ್ಲಿ ನಡೆದ ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ನಾಗರಾಜು ಅವರು, ಗಣವೇಷ ಧರಿಸಿ ಭಾಗವಹಿಸಿದ್ದರು. ಕೆಸಿಎಸ್‌‍ಆರ್‌ ನಿಯಮದ ಪ್ರಕಾರ ಸರ್ಕಾರಿ ನೌಕರರು ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಬಂಧನೆಯಿದೆ.

ಈ ಮೊದಲು ನಡೆದಿದ್ದ ಪಥ ಸಂಚಲನದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಿಡಿಓ ಅವರನ್ನು ಅಮಾನತು ಗೊಳಿಸಲಾಗಿತ್ತು. ಅದರ ಬಳಿಕವೂ ತಾಲ್ಲೂಕು ವೈದ್ಯಾಧಿಕಾರಿ ಅವರು ಪಥ ಸಂಚಲನದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.ನಿನ್ನೆಯ ಸೇಡಂ ಪಥ ಸಂಚಲನದಲ್ಲಿ ಕೆಲ ಕಾಂಗ್ರೆಸ್‌‍ ಕಾರ್ಯಕರ್ತರೂ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.

RELATED ARTICLES

Latest News