Monday, October 20, 2025
Homeರಾಜ್ಯಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ನಿರ್ಬಂಧ : ಸರ್ಕಾರದ ವಿರುದ್ಧ ಶೆಟ್ಟರ್‌ ವಾಗ್ದಾಳಿ

ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ನಿರ್ಬಂಧ : ಸರ್ಕಾರದ ವಿರುದ್ಧ ಶೆಟ್ಟರ್‌ ವಾಗ್ದಾಳಿ

Restrictions on RSS activities: Shettar attacks government

ಧಾರವಾಡ,ಅ.20- ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರವೇ ಅನುಮತಿ ನೀಡಿರುವಾಗ ರಾಜ್ಯ ಸರ್ಕಾರ ಅದಕ್ಕೆ ನಿರ್ಬಂಧ ಹಾಕುವುದು ಎಷ್ಟರಮಟ್ಟಿಗೆ ಸರಿ
ಎಂದು ಸಂಸದ ಜಗದೀಶ್‌ಶೆಟ್ಟರ್‌ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 66 ವರ್ಷಗಳ ಹಿಂದೆ ಹಾಕಿದ್ದ ನಿರ್ಬಂಧವನ್ನು ಕೇಂದ್ರ ಗೃಹ ಇಲಾಖೆ ತೆಗೆದು ಹಾಕಿದೆ. ಆರ್‌ಎಸ್‌‍ಎಸ್‌‍ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಅವಕಾಶವಿದೆ. ಪಿಡಿಒ ಅಮಾನತು ಸರಿಯಲ್ಲ ಎಂದು ಆಕ್ಷೇಪಿಸಿದರು.

1966ರಲ್ಲಿ ನೆಹರು ಅವರು ಆರ್‌ಎಸ್‌‍ಎಸ್‌‍ ಮತ್ತು ಇಸ್ಲಾಂ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಅಂತಾ ಆದೇಶ ಮಾಡಿದ್ದರು. 1970ರಲ್ಲಿ ಅದು ಕೊಂಚ ತಿದ್ದುಪಡಿಯಾಗಿದ್ದು, 1980ರಲ್ಲಿ ಮತ್ತೊಮೆ ತಿದ್ದುಪಡಿ ಮಾಡಲಾಗಿದೆ. ಮೋದಿ ಪ್ರಧಾನಿ ಅವರು ಜು. 9, 2024ರಲ್ಲಿ ಸಂಘದ ಚಟುವಟಿಕೆ ಮಾಡುವ ಬಗ್ಗೆ ಮತ್ತೊಂದು ಆದೇಶ ಮಾಡಿದ್ದಾರೆ. ಅದರಲ್ಲಿ ಹಿಂದಿನ ಆದೇಶದಲ್ಲಿದ್ದ ಆರ್‌ಎಸ್‌‍ಎಸ್‌‍ ಹೆಸರನ್ನು ತೆಗೆಯಲಾಗಿದೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಆದೇಶವಾಗಿದೆ ಎಂದರು.

ಸಂಘದ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ತೊಂದರೆ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ರೀತಿ ಆದೇಶಿಸಲು ಅಧಿಕಾರವಿಲ್ಲ. ಲಿಂಗಸೂರಿನಲ್ಲಿ ಪಿಡಿಒರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ. ಈ ಆದೇಶದ ಪ್ರಕಾರ ಅಮಾನತು ಮಾಡುವಂತಿಲ್ಲ. ಕೂಡಲೇ ಅಮಾನತು ಆದೇಶವನ್ನು ಹಿಂಪಡೆಯಬೇಕು. ಕೋರ್ಟ್‌ಗೆ ಹೋದರೆ ಸರ್ಕಾರದ ಆದೇಶ ವಜಾ ಆಗುತ್ತದೆ ಎಂದರು.

ಆರ್‌ಎಸ್‌‍ಎಸ್‌‍ ವಿಚಾರದಲ್ಲಿ ತಮ ಮೇಲಿನ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 2013ರಲ್ಲಿ ಬಿಜೆಪಿಯೇ ಈ ಆದೇಶ ಮಾಡಿತ್ತು ಅಂತಾರೆ. ನಾನು ಸಿಎಂ ಇದ್ದಾಗಿನ ಆದೇಶವನ್ನೇ ಮುಂದುವರೆಸಿರುವುದಾಗಿ ಹೇಳುತ್ತಾರೆ. ಅವತ್ತು ಆಗಿದ್ದ ಆದೇಶವನ್ನು ಸರಿಯಾಗಿ ಅವರು ಓದಿದ್ದಾರಾ?. ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌‍ಎಸ್‌‍ ಪದ ಬಳಸಿಲ್ಲ. ನಮ ಕ್ಯಾಬಿನೆಟ್‌ ಸಭೆಯಲ್ಲಿ ಮಾಡಿದ್ದ ಆದೇಶವಲ್ಲ. ಯಾವುದೋ ಒಂದು ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಜಾಗ ಕೇಳಿದ್ದರು. ಶಿಕ್ಷಣ ಇಲಾಖೆ ಜಾಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ಡಿಡಿಪಿಐಗೆ ಬರೆದಿರುವ ಆದೇಶವದು. ಇನ್ನಾದರು ನಾಟಕ ಮಾಡೋದನ್ನು ಬಿಡಿ ಎಂದು ವಾಗ್ದಾಳಿ ಮಾಡಿದರು.

ಚಿತ್ತಾಪುರ ಘಟನೆ: ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಅನುಮತಿ ಪಡೆಯುವ ಚಿತ್ತಾಪುರದ ಘಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್‌ ಖರ್ಗೆಗೆ ಏನಾಗಿದೆಯೋ ಗೊತ್ತಿಲ್ಲ. ಸಿದ್ದು ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚಿತ್ತಾಪುರ ಪಥಸಂಚಲನದಲ್ಲಿ ಸಾವಿರಾರು ಯುವಕರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಇದರ ಜನಪ್ರಿಯತೆಯನ್ನು ಸಿಎಂಗೂ, ಪ್ರಿಯಾಂಕ್‌ ಖರ್ಗೆಗೆ ಸಹಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಚಿತ್ತಾಪುರದಲ್ಲಿ ತಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಗುತ್ತಿಗೆದಾರರು 33,000 ಕೋಟಿ ಬಿಲ್‌ ಬಾಕಿ ಇದೆ ಎನ್ನುತ್ತಿದ್ದಾರೆ. ಹಂತ ಹಂತವಾಗಿ ಕೊಡಬಹುದಿತ್ತು, ಅದನ್ನು ಕೊಡುವ ಕೆಲಸವೂ ಆಗುತ್ತಿಲ್ಲ. ಅವರು ಆತಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ರೈತರು ಆತಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಪರಿಹಾರದ ಹಣ ಕೊಡುತ್ತಿಲ್ಲ. ಇಡೀ ಆಡಳಿತ ಕುಸಿದು ಹೋಗಿದೆ. ಹೀಗಾಗಿ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಒಂದೊಂದೇ ವಿಚಾರ ಹೊರಗೆ ಬಿಡುತ್ತಿದ್ದಾರೆ ಶೆಟ್ಟರ್‌ ಇದೇ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

RELATED ARTICLES

Latest News