ಬೆಂಗಳೂರು,ಅ.20-ಓಲಾ ಕಂಪನಿ ನೌಕರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸುಬ್ರಹಣ್ಯಪುರ ಪೊಲೀಸ್ ಠಾಣೆಯಲ್ಲಿ ಕಂಪನಿ ಸಿಇಓ ಹಾಗೂ ಹಿರಿಯ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಿಇಓ ಭವೇಶ್, ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ದೂರು ದಾಖಲಾಗಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯ ಹೋಮೋಲೋಗೆಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ.ಅರವಿಂದ್ ಅವರು ಚಿಕ್ಕಲ್ಲಸಂದ್ರ ಮಂಜುನಾಥನಗರದ ನಿವಾಸಿ ಸೆ.28 ರಂದು 11.30 ರಿಂದ 12.45 ರ ನಡುವೆ ಆತಹತ್ಯೆ ಮಾಡಿಕೊಂಡಿದ್ದರು.
ಅಂದು ಪೊಲೀಸರು ಯುಡಿಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ನಡುವೆ ಅರವಿಂದ್ ಅವರ ಖಾತೆಗೆ ಕಂಪನಿಯಿಂದ 17.46 ಲಕ್ಷ ಹಣ ಜಮೆಯಾಗಿರುವುದನ್ನು ಗಮನಿಸಿ ಕುಟುಂಬದವರು ಕಂಪನಿಯವರನ್ನು ಪ್ರಶ್ನಿಸಿದಾಗ, ಕಂಪನಿಯ ಹೆಚ್‌ಆರ್ ಸೇರಿದಂತೆ ಕೆಲ ಸಿಬ್ಬಂದಿ ಅಸ್ಪಷ್ಟ ಮಾಹಿತಿ ನೀಡಿದ್ದಾರೆ.
ಸಿಬ್ಬಂದಿಯ ವರ್ತನೆಯಿಂದ ಅನುಮಾನಗೊಂಡ ಕುಟುಂಬದವರು ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಸುಮಾರು 28 ಪುಟಗಳ ಡೆತ್‌ನೋಟ್ ಪತ್ತೆಯಾಗಿದೆ. ಡೆತ್‌ನೋಟ್‌ನಲ್ಲಿ ಕೆಲಸದ ವಿಚಾರವಾಗಿ ಕಂಪನಿಯ ಹಿರಿಯ ಅಧಿಕಾರಿ ಸುಬ್ರತ್‌ಕುಮಾರ್ ದಾಸ್, ಸಿಇಓ ಭವೇಶ್ ಅಗರ್ವಾಲ್ ಇವರಿಬ್ಬರೂ ತೀವ್ರ ಒತ್ತಡ ನೀಡುತ್ತಿದ್ದಾರೆ. ನನಗೆ ಭತ್ಯೆ ಮತ್ತು ವೇತನ ನೀಡದೇ ಕಿರುಕುಳ ನೀಡುತ್ತಿರುವುದರಿಂದ ಆತಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.
ಡೆತ್‌ನೋಟ್ ಆಧಾರದಲ್ಲಿ ಇದೀಗ ಅರವಿಂದ್ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಪೊಲೀಸರು ಕಂಪನಿಯ ಸಿಇಓ ಹಾಗೂ ಹಿರಿಯ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.