ಬೆಂಗಳೂರು, ಅ.21- ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್ ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ. ಇದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಲೀಸ್ ಸಂಸರಣಾ ದಿನಾಚರಣೆಯಲ್ಲಿ ಹುತಾತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಂತಾಪ ಸಲ್ಲಿಸಿ ಮಾತನಾಡಿದರು. ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸ. ಹಾಗೆಯೇ ಮಾದಕ ವಸ್ತು ಹಾವಳಿಗೂ ಬ್ರೇಕ್ ಬಿದ್ದಿದ್ದು ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಈ ಸಾಧನೆಯ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದರು.
ರಾಜ್ಯದಲ್ಲಿ ಪರಿಶಿಷ್ಠ ಜಾತಿ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್ ಪೊಲೀಸ್ ಠಾಣೆಗಳನ್ನು ಕಾರ್ಯೋನುಖಗೊಳಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಆಗಬೇಕಿದೆ ಎಂದರು.
ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್‌ಯ ನಿರ್ವಹಣೆ ವೇಳೆ ಪ್ರಾಣತ್ಯಾಗ ಮಾಡುವ ಹುತಾತರಾಗಿದ್ದಾರೆ. ಇವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಇವರನ್ನು ಇಡೀ ದೇಶ ಸರಿಸಿ, ವಂದಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ದೇಶದ ಶಾಂತಿ ಸುವ್‌ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್ ಸಿಬ್ಬಂದಿ ಅಗ್ರ ಸ್ಥಾನದಲ್ಲಿದ್ದಾರೆ. ಕೋಮು ಶಕ್ತಿಗಳು, ದುಷ್ಟ ಶಕ್ತಿಗಳ ನಿಗ್ರಹದಲ್ಲಿ ನಿಮ ಪಾತ್ರ ದೊಡ್ಡದಿದೆ. ಸಂವಿಧಾನದಲ್ಲಿ ಜನರಿಗೆ ಕೊಟ್ಟಿರುವ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ ಎಂದರು.
ತಮ ಸರ್ಕಾರ 116 ಮಂದಿಗೆ ಅನುಕಂಪದ ಆಧಾರದ ಅಡಿ ಸರ್ಕಾರ ಉದ್ಯೋಗ ನೀಡಿ ಆದೇಶ ಹೊರಡಿಸಿದೆ. ನಿವೃತ್ತ ಪೊಲೀಸರ ಆರೋಗ್ಯ ಯೋಜನೆಯ ವೈದ್ಯಕೀಯ ಮರು ಪಾವತಿ ವೆಚ್ಚವನ್ನು ವಾರ್ಷಿಕ 1 ಲಕ್ಷ ರೂಗಳಿಂದ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು 1 ಸಾವಿರ ರೂಗಳಿಂದ 1500 ರೂ.ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.ಎ. ಸಲೀಂ, ಗೃಹ ಇಲಾಖೆಯ ಅಪಾರ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.