ಹಾಸನ,ಅ.21-ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ಶಕ್ತಿ ದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿ ಮುಖವಾಗಿದೆ. ಕಳೆದ 12 ದಿನಗಳಿಂದ ದೇವಿಯ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ, ಹರಸಾಹಸಪಟ್ಟು ದರ್ಶನ ಪಡೆದಿದ್ದರು.
ಭಕ್ತರನ್ನು ನಿಯಂತ್ರಿಸುವುದು ಕೂಡ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸಾಹಸದ ಕೆಲಸವಾಗಿತ್ತು. ಆದರೆ ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿ ಮುಖವಾಗಿತ್ತು. ಕಿಮೀ ಗಟ್ಟಲೆ ನಿಲ್ಲುತ್ತಿದ್ದ ಧರ್ಮ ದರ್ಶನದ ಸಾಲು ಇಂದು ಖಾಲಿ ಖಾಲಿಯಾಗಿತ್ತು. ಇಂದು ದರ್ಶನಕ್ಕೆ ಬಂದಿದ್ದ ಭಕ್ತರು ಸರಾಗವಾಗಿ ದೇವಿಯನ್ನು ಕಣ್ತುಂಬಿಕೊಂಡರು. ಕಳೆದ ಅ.10 ರಿಂದ ಪ್ರಾರಂಭವಾಗಿ ಸಾರ್ವಜನಿಕ ದರ್ಶನಕ್ಕೆ ನಾಳೆ ಸಂಜೆ ಕೊನೆಯಾಗಲಿದ್ದು,ಇಲ್ಲಿಯವರೆಗೆ ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ.
ದೇವಿಯ ದರ್ಶನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಟಿಕೆಟ್ ಹಾಗೂ ಲಾಡು ಮಾರಾಟದಿಂದ ಬರೋಬ್ಬರಿ 17 ಕೋಟಿಗೂ ಹೆಚ್ಚು ಆದಾಯ ಹರಿದು ಬಂದಿದೆ. ದೀಪಾವಳಿ ಪ್ರಯುಕ್ತ ಇಂದು ರಾತ್ರಿ 9 ಗಂಟೆಗೆ ಸಾರ್ವಜನಿಕ ದರ್ಶನದ ಬಾಗಿಲುಗಳನ್ನು ಮುಚ್ಚಲಾಗುವುದು. ನಾಳೆ ಬೆಳಗಿನ ಜಾವ 5.30ಕ್ಕೆ ಪೂಜೆ ಮುಗಿದ ನಂತರ ಮತ್ತೆ ದರ್ಶನ ಆರಂಭವಾಗಲಿದೆ. ಸಂಜೆ 7 ಗಂಟೆಯವರೆಗೆ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದ್ದು ಗುರುವಾರ 12.30 ಕ್ಕೆ ಪೂಜೆ ಹಾಗೂ ನೈವೇದ್ಯವನ್ನಿಟ್ಟು ಬಾಗಿಲನ್ನು ಮುಚ್ಚಲಾಗುವುದು.
ಗುರುವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ. ಕಳೆದ 12 ದಿನಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದರು. ಕಳೆದ 4 ದಿನಗಳಿಂದ ಭಕ್ತರ ಸಂಖ್ಯೆ ಬಹಳಷ್ಟು ಸಂಖ್ಯೆ ಹೆಚ್ಚಳವಾಗಿತ್ತು. ಭಕ್ತರನ್ನು ನಿಯಂತ್ರಿಸುವುದೇ ಒಂದು ಸವಾಲಾಗಿತ್ತು.
ಕೊನೆಯ 2 ದಿನ ಮತ್ತಷ್ಟು ಭಕ್ತರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇಂದು ಭಕ್ತರ ಸಂಖ್ಯೆ ಮಾತ್ರ ಇಳಿಮುಖವಾಗಿತ್ತು. ಒಂದೆಡೆ ಮಳೆ ಹಾಗೂ ಹೆಚ್ಚಿದ ಭಕ್ತರ ನಡುವೆ ಜಂಜಾಟವೇಕೆ ಎಂದು ಕೆಲವರು ಪ್ಲಾನ್ ಬದಲಾಯಿಸಿ ಬೇರೆಡೆ ತೆರಳಿದ್ದರಿಂದ ಇಂದು ಭಕ್ತರ ಸಂಖ್ಯೆ ಇಳಿಕೆಯಾಗಿದೆ.
ಈ ಭಾರಿ ಹೆಚ್ಚಾಗಿ ಚಲನಚಿತ್ರ ನಟ-ನಟಿಯರು, ಮಠಾಧೀಶರು,ರಾಜಕೀಯ ನಾಯಕರುಗಳು ಹಾಗೂ ಗಣ್ಯರು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ದೇವಿಯ ದರ್ಶನ ಪಡೆದಿದ್ದಾರೆ. ಈ ಭಾರಿ ಹಾಸನಾಂಬ ಜಾತ್ರಾ ಮಹೋತ್ಸವ ಇತಿಹಾಸ ಸೃಷ್ಟಿಸಿದೆ.