ಬೆಂಗಳೂರು, ಅ.21- ಬೆಂಗಳೂರಿನ ರಸ್ತೆ ಗುಂಡಿಗಳನ್ನು ಒಂದು ವಾರದೊಳಗಾಗಿ ಮುಚ್ಚಬೇಕು. ಎಲ್ಲಾ ರಸ್ತೆಗಳಿಗೂ ಒಂದು ಪದರದ ಟಾರ್ ಹಾಕುವಂತೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಆರ್.ಟಿ. ಸ್ಟ್ರೀಟ್, ಚಿಕ್ಕಪೇಟೆ, ಬಳೆಪೇಟೆ, ಗಾಂಧಿನಗರ ಭಾಗದಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ 1.20 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಕೇಂದ್ರದಿಂದ ಒಂದು ರೂ.ಕೂಡ ನೆರವು ಸಿಗುತ್ತಿಲ್ಲ. ನಾಗರಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇನ್ನೊಂದು ವಾರದಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲೇ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ಮಳೆ ಹೆಚ್ಚಾಗಿ ಬಂದಿದ್ದದರಿಂದಾಗಿ ಗುಂಡಿಗಳನ್ನು ಮುಚ್ಚಲು ಕಷ್ಟವಾಗುತ್ತಿದೆ. ವೈಟ್ ಟಾಪಿಂಗ್ ಕಾಮಗಾರಿ ಇದಕ್ಕೆ ಪರಿಹಾರವಾಗಿದೆ. ಸದ್ಯಕ್ಕೆ ರಸ್ತೆಗಳಿಗೆ ಒಂದು ಪದರದ ಟಾರ್ ಹಾಕುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಬಾರಿ ಎಲ್ಲಾ ಶಾಸಕರಿಗೂ ಹಣ ನೀಡಲು ಬಜೆಟ್‌ನಲ್ಲಿ 8 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿಕೊಂಡಿದ್ದಾಗಿ ಹೇಳಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಸಕರ ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಹಣ ನೀಡಲಾಗುತ್ತದೆ. ಈ ಮೂಲಕ ಸಮಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ ಎಂದು ಬಿಜೆಪಿಯವರು ಟೀಕೆ ಮಾಡುತ್ತಾರೆ. ಅವರ ಕಾಲದಲ್ಲಿ ಗುಂಡಿಗಳಿರಲಿಲ್ಲವೇ ಎಂದು ಕಿಡಿಕಾರಿದ ಮುಖ್ಯಮಂತ್ರಿ ಅವರು, ಹಿಂದೆ ನಾವು ಮಾಡಿದ ರಸ್ತೆಗಳನ್ನು ಹೊರತು ಪಡಿಸಿದರೆ ಬಿಜೆಪಿಯವರ ಯೋಗ್ಯತೆಗೆ ಆಡಳಿತ ನಡೆಸಿದಾಗ ಒಂದು ಹಿಡಿ ಮಣ್ಣು ಹಾಕಿರಲಿಲ್ಲ. ಜೊತೆಗೆ ಹಣ ಇಲ್ಲದೇ ಇದ್ದರೂ 2.10 ಲಕ್ಷ ರೂ. ವೆಚ್ಚದ ಯೋಜನೆಗಳಿಗೆ ಮಂಜೂರಾತಿ ನೀಡಿದ್ದರು. ಅದೆಲ್ಲಾ ಬಾರವೂ ನಮ ಮೇಲೆ ಬಿದ್ದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಾಲದ ಹೊರೆಯ ಜೊತೆಗೆ ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತಂದಿದ್ದೇವೆ. ಗ್ಯಾರಂಟಿಗಳು ಜಾರಿಯಾಗುವುದಿಲ್ಲ ಎಂದು ಅಹಹಾಸ್ಯ ಮಾಡಿದ್ದ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಿದ್ದೇವೆ. ಒಂದು ಲಕ್ಷ ಕೋಟಿ. ರೂ.ಗಳನ್ನು ಗ್ಯಾರಂಟಿಗಳಿಗಾಗಿಯೇ ಬಳಸಿದ್ದೇವೆ ಎಂದು ಹೇಳಿದರು.
ಆರ್‌ಎಸ್‌ಎಸ್ ಹೇಳಿದಂತೆ ಮಾತನಾಡುವ ಬಿಜೆಪಿ ನಾಯಕರು:
ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿ ಎಲ್ಲಾ ನಾಯಕರು ಆರ್‌ಎಸ್‌ಎಸ್ ಹೇಳಿ ಕೊಟ್ಟ ಗಿಳಿ ಪಾಠವನ್ನು ಒಪ್ಪಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ವತಂತ್ರ್ಯವಾಗಿ ಏನನ್ನೂ ಮಾತನಾಡುವುದಿಲ್ಲ, ವಿಧಾನಸಭೆಯಲ್ಲಿ ನಾನು ಒಮೆ ಅಶೋಕ್ ಅವರ ಜೊತೆ ಚರ್ಚೆ ಮಾಡಿದ್ದಾಗ, ನಾವು ಆರ್‌ಎಸ್‌ಎಸ್‌ನವರು ಹೇಳಿಕೊಟ್ಟಂತೆ ಹೇಳದಿದ್ದರೆ ನಮನ್ನು ಉಳಿಸುವುದಿಲ್ಲ. ಇಲ್ಲಿ ಒಬ್ಬ ಆರ್‌ಎಸ್‌ಎಸ್‌ಗೆ ಸೇರಿದ ವ್ಯಕ್ತಿ ಕುಳಿತಿರುತ್ತಾರೆ. ನಮನ್ನು ಗಮನಿಸುತ್ತಾರೆ ಎಂದು ಅಳಲು ತೋಡಿಕೊಂಡರು ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಎಷ್ಟು ಒಳ್ಳೆಯವರಂತೆ ಕಾಣುತ್ತಾರೋ ಅವರಿಗೆ ಕರ್ನಾಟಕದ ಬಗ್ಗೆ ಅಷ್ಟೇ ದ್ವೇಷವಿದೆ. ಆದ್ದರಿಂದ ಹಣಕಾಸು ಆಯೋಗದ ಪ್ರಕಾರ ಕರ್ನಾಟಕಕ್ಕೆ 11495 ಕೋಟಿ. ರೂ.ಗಳು ಬರಬೇಕಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ ಕೆಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದರು. ಅದರಲ್ಲಿ ಒಂದು ರೂ. ಕೊಟ್ಟಿಲ್ಲ. ಮೋದಿ ಮುಖ ನೋಡಿ ಸಂಸತ್ ಚುನಾವಣೆಯಲ್ಲಿ ಜನ ಮತ ಹಾಕಿದ್ದರು. ಆಯ್ಕೆಯಾದ ಸಂಸದರು ರಾಜ್ಯದ ಪರವಾಗಿ ಒಂದೂ ದಿನವೂ ಧ್ವನಿ ಎತ್ತಿಲ್ಲ. ಸಂಸದರಾದ ತೇಜಸ್ವಿಸೂರ್ಯ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ ಒಂದು ದಿನವೂ ಕರ್ನಾಟಕದ ಪರವಾಗಿ ಮಾತನಾಡಿಲ್ಲ. ಇದನ್ನು ನೋಡಿದರೇ ನಿಮಗೆ ಸಿಟ್ಟು ಬರುವುದಿಲ್ಲವೇ? ರಾಜ್ಯಕ್ಕೆ ದ್ರೋಹ, ಅನ್ಯಾಯ ಮಾಡುತ್ತಿರುವ ಇವರನ್ನು ಚುನಾವಣೆಯಲ್ಲಿ ಸೋಲಿಸುವ ಕೆಲಸ ಮಾಡಿ. ನಿಮ ಧಮಯ್ಯ ಎಂದು ಮನವಿ ಮಾಡಿದರು.
ಜಿಎಸ್‌ಟಿ ವಸೂಲಿಗೆ ಆಕ್ರೋಶ:
8 ವರ್ಷದಿಂದ ಜಿಎಸ್ಟಿ ದುಬಾರಿ ತೆರಿಗೆ ವಸೂಲಿ ಮಾಡಿದ ಕೇಂದ್ರ ಸರ್ಕಾರ ಈಗ ಕಡಿಮೆ ಮಾಡಿ, ದೀಪಾವಳಿ ಕೊಡುಗೆಯೆಂದು ಬಿಂಬಿಸಿಕೊಳ್ಳುತ್ತಿದೆ. ಇಷ್ಟು ವರ್ಷ ಜನರಿಂದ ದುಬಾರಿ ತೆರಿಗೆ ವಸೂಲಿ ಮಾಡಿದ ಬಗ್ಗೆ ಬಿಜೆಪಿ ಸರ್ಕಾರ ಯಾವ ರೀತಿಯ ಉತ್ತರ ನೀಡುತ್ತದೆ ಎಂದು ಪ್ರಶ್ನಿಸಿದರು.
ಈಗ ಬಿಜೆಪಿಯ ಎಲ್ಲಾ ಶಾಸಕರು ನರೇಂದ್ರ ಮೋದಿ ಅವರ ಫೋಟೋ ಹಾಕಿಸಿಕೊಂಡು ದೀಪಾವಳಿ ಗಿಫ್‌್ಟ ಎನ್ನುತ್ತಿದ್ದಾರೆ. ಇದು ಸ್ವೀಕಾರಾರ್ಹವೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿದ್ದ ನಾಗರಿಕರೊಬ್ಬರು ಮೋದಿ ಸರ್ಕಾರ ಜಿಎಸ್‌ಟಿ ಜೊತೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರದಲ್ಲೂ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಇದನ್ನು ಬಿಜೆಪಿಯವರ ಬಳಿ ಕೇಳಿ ಎಂದು ಸಿದ್ದರಾಮಯ್ಯ ಹೇಳಿದರು.
ಅವರಿಗೆ ಜನರ ಕೂಗು ಕೇಳುವುದಿಲ್ಲ, ಕಿವಿ ಕಿವುಡಾಗಿದೆ ಎಂದು ನಾಗರಿಕರು ಪ್ರತಿಕ್ರಿಯಿಸಿದರು. ಹಾಗಿದ್ದ ಮೇಲೆ ಮೋದಿ ಮೋದಿ ಎಂದು ಘೋಷಣೆ ಕೂಗಿ ಚುನಾವಣೆಯಲ್ಲಿ ಮತ ಹಾಕುವುದೇಕೇ? ಎಂದು ಸಿದ್ದರಾಮಯ್ಯ ಹಂಗಿಸಿದರು.
ಗುಣಮಟ್ಟದ ಕಾಮಗಾರಿಗೆ ಸೂಚನೆ:
ಬೆಂಗಳೂರಿನಲ್ಲಿ ಹಳೆಯ ಗುತ್ತಿಗೆದಾರರಿದ್ದಾರೆ. ರಾಜಕಾರಣಿಗಳ ಜೊತೆ ಸೇರಿ ಕಳಪೆ ಕಾಮಗಾರಿಯಾಗುವ ಸಾಧ್ಯತೆಯಿದೆ. ಕಾರ್ಯಕರ್ತರು ಎಚ್ಚರದಿಂದಿರಬೇಕು. ವೈಟ್ ಟಾಪಿಂಗ್ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇರಬಾರದು, ಕನಿಷ್ಠ 30 ವರ್ಷ ಊರ್ಜಿತವಾಗುವ ರಸ್ತೆ ನಿರ್ಮಾಣವಾಗಬೇಕು ಎಂದರು.
ಬೆಂಗಳೂರಿನ ವಿಸ್ತೀರ್ಣ ದೊಡ್ಡದಾಗಿರುವುದರಿಂದ ಇದನ್ನು ವಿಭಜಿಸಲು ಬಿಜೆಪಿಯ ಆಡಳಿತದಲ್ಲೇ ಆಲೋಚನೆ ನಡೆದಿತ್ತು. ನಾವು ಬೆಂಗಳೂರನ್ನು 5 ಪಾಲಿಕೆಗಳನ್ನಾಗಿ ಮಾಡಿದ್ದೇವೆ. ಜಿಬಿಎ ರಚನೆಯಾಗಿದ್ದು, ಆ ಪ್ರಾಧಿಕಾರಕ್ಕೆ ನಾನೇ ಅಧ್ಯಕ್ಷನಾಗಿದ್ದೇನೆ. ಉತ್ತಮ ಆಡಳಿತ ದೃಷ್ಟಿಯಿಂದ ವಿಭಜನೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗಾಂಧಿನಗರ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ದಿನೇಶ್‌ಗುಂಡೂರಾವ್, ಯೋಜನಾ ಸಚಿವ ಡಿ.ಸುಧಾಕರ್, ಶಾಸಕರಾದ ಅಜಯ್‌ಸಿಂಗ್, ವೆಂಕಟೇಶ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್‌ರಾವ್ ಮತ್ತು ಇತರರು ಇದ್ದರು.