ಕರ್ನೂಲ್, ಅ.24- ಹೈದರಾಬಾದ್ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಕರ್ನೂಲ್ ಜಿಲ್ಲೆಯ ಚಿನ್ನೇಕೂರ್ ಬಳಿ ಬೈಕ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹಸುಗೂಸು ಸೇರಿ ಒಟ್ಟು 20ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದು, 15 ಮಂದಿ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಓರಿಸ್ಸಾದಲ್ಲಿ ನೋಂದಾಯಿತ ಕಾವೇರಿ ಟ್ರಾವಲ್ಸ್ ನ ಐಶಾರಾಮಿ ಸ್ಲೀಪರ್ ಕೋಚ್ ಬಸ್ನಲ್ಲಿ 40 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್ ಕರ್ನೂಲ್ನ ಚಿನ್ನೇಕೂರ್ ಬಳಿ ಬರುತ್ತಿದ್ದಂತೆ ಮೊದಲು ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಚಾಲಕ ಬಸ್ ನಿಲ್ಲಿಸದೇ ಇದ್ದುದರಿಂದ ಬೈಕ್ನ್ನು ಸುಮಾರು ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕ್ನ ಪೆಟ್ರೋಲ್ ಟ್ಯಾಂಕ್ಗೆ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ. ಇದರಿಂದ ಬಸ್ ಗೆ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿತಾಗಿ ಬಸ್ ಪೂರ್ತಿ ಬೆಂಕಿ ಆವರಿಸಿಕೊಂಡಿದೆ.
ಮುಂಜಾನೆ 3.30ರ ಸವಿ ನಿದ್ದೆಯ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಪ್ರಯಾಣಿಕರು ಏನಾಗುತ್ತಿದೆ ಎಂದು ಅರ್ಥೈಸಿಕೊಳ್ಳುವ ವೇಳೆಗೆ ಬಸ್ ಪೂರ್ತಿ ಬೆಂಕಿಯ ಕೆನ್ನಾಲಿಗೆ ಹಾಗೂ ಹೊಗೆ ಆವರಿಸಿದೆ. ಎಸಿ ಸ್ಲೆಪರ್ ಕೋಚ್ ಬಸ್ ಆಗಿದ್ದರಿಂದ ಎಲ್ಲಾ ಕಿಟಕಿಯ ಗಾಜುಗಳು ಮುಚ್ಚಲ್ಪಟ್ಟಿದ್ದವು. ದುರಾದೃಷ್ಟವಶಾತ್ ಬಸ್ನ ಬೆಂಕಿಯ ಕೆನ್ನಾಲಿಗೆಯಿಂದ ವೈರ್ಗಳು ಸುಟ್ಟು ಬಸ್ನ ಯಾಂತ್ರೆಕೃತ ಬಾಗಿಲು ಕೂಡ ತೆರೆಯದೆ ಜಾಮ್ ಆಗಿತ್ತು ಎನ್ನಲಾಗಿದೆ.
ಕೆಲವು ಪ್ರಯಾಣಿಕರು ಕಿಟಕಿಯ ಗಾಜುಗಳನ್ನು ಹೊಡೆದು ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬಹುತೇಕರಿಗೆ ಇದು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್ ಮತ್ತು ಅವರ ಕುಟುಂಬ ದೀಪಾವಳಿ ಹಬ್ಬಕ್ಕಾಗಿ ಹೈದರಬಾದ್ನಲ್ಲಿರುವ ತಮ ತವರಿಗೆ ಹೋಗಿತ್ತು. ವಾಪಾಸ್ ಬರುವಾಗ ಈ ದುರುಂತ ಸಂಭವಿಸಿ, ರಮೇಶ್, ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಇಡೀ ಕುಟುಂಬ ಬೆಂಕಿಗಾಹುತಿಯಾಗಿದೆ.
ಸುದ್ದಿ ತಿಳಿದು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಬಸ್ನ ಡಿಸೇಲ್ ಟ್ಯಾಂಕ್ ಗೆ ಬೆಂಕಿ ಹೊತ್ತಿಕೊಂಡಿಲ್ಲ. ಒಂದು ವೇಳೆ ಟ್ಯಾಂಕ್ಗೆ ಬೆಂಕಿ ತಾಗಿ ಸ್ಫೋಟಿಸಿದ್ದರೆ ಬಸ್ನಲ್ಲಿ ಯಾರೂ ಬದುಕಿ ಉಳಿಯುವ ಸಾಧ್ಯತೆಗಳು ಕಡಿಮೆ ಇತ್ತು ಎನ್ನಲಾಗಿದೆ.
ಬೈಕ್ ಸವಾರ ಸೇರಿ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಸ್ಸಿನಲ್ಲಿ ಚಾಲಕ ಸೇರಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಕರ್ನೂಲ್ ಜಿಲ್ಲಾಧಿಕಾರಿ ಡಾ.ಎ.ಸಿರಿ ತಿಳಿಸಿದ್ದಾರೆ.
ಬಸ್ನಲ್ಲಿ ಸಜೀವ ದಹನವಾದ 20 ಮಂದಿಯ ಪೈಕಿ 11 ಜನರ ಗುರುತು ಪತ್ತೆ ಹಚ್ಚಲಾಗಿದೆ. ಇನ್ನೂಳಿದ ಒಂಬತ್ತು ಜನರ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಕರ್ನೂಲ್ ವಿಭಾಗದ ಡಿಐಜಿ ಕೋಯಾ ಪ್ರವೀಣ್ ಮಾಹಿತಿ ನೀಡಿದ್ದಾರೆ.
ಸಜೀವ ದಹನವಾಗಿರುವ ದೇಹಗಳ ಡಿಎನ್ಎ ಮಾದರಿಗಳನ್ನು ವೈದ್ಯಕೀಯ ತಜ್ಞರ ತಂಡ ಸಂಗ್ರಹಿಸಿದೆ. ಮುಂಜಾನೆ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ದುರಂತ ಸಂಭವಿಸಿದ ಕಾರಣ ಅನೇಕ ಪ್ರಯಾಣಿಕರು ದುರಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ವಿಷಾಧಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ಬಸ್ನಲ್ಲಿ ಯಾವುದೇ ಅಗ್ನಿಶಾಮಕ ನಿಯಂತ್ರಣ ಸಾಧನಗಳು ಇರಲಿಲ್ಲ ಎಂದು ಡಿಐಜಿ ತಿಳಿಸಿದ್ದಾರೆ. ಇದು ಪ್ರಯಾಣದ ಸಮಯದಲ್ಲಿ ಸುರಕ್ಷತಾ ಅನುಸರಣೆ ಮತ್ತು ತುರ್ತು ಸಿದ್ಧತೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಬಸ್ ದುರಂತದ ಬೆನ್ನಲ್ಲೇ ಖಾಸಗಿ ಬಸ್ಗಳ ಸುರಕ್ಷತೆಯ ಕುರಿತು ಚರ್ಚೆಗಳು ಶುರುವಾಗಿವೆ.
ಅಮಾಯಕರ ಜೀವಗಳ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಖಾಸಗಿ ಬಸ್ ಮಾಲೀಕರ ವಿರುದ್ಧ ಇಂತಹ ದುರ್ಘಟನೆಗಳು ಸಂಭವಿಸಿದಾಗ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲು ತಮ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ತೆಲಂಗಾಣ ರಾಜ್ಯ ಸಾರಿಗೆ ಸಚಿವ ಪೂನಂ ಪ್ರಭಾಕರ್ ಎಚ್ಚರಿಕೆ ನೀಡಿದ್ದಾರೆ.
ಕರ್ನೂಲ್ ಬಳಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂತಾಪ: ಬಸ್ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಜೀವ ನಷ್ಟಕ್ಕೆ ಒಳಗಾದ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
2 ಲಕ್ಷ ಪರಿಹಾರ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಸ್ ದುರಂತದಲ್ಲಿ ಮೃತಪಟ್ಟವರಿಗಾಗಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನೀಡುವುದಾಗಿ ತಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ಬೆಂಬಲ:ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುವುದಾಗಿ ಹೇಳಿರುವ ಅವರು, ಗಾಯಗೊಂಡವರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಸಂತಾಪ:
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಅಗಲಿದವರ ಆತಕ್ಕೆ ಸದ್ಗತಿ ಸಿಗಲಿ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಸಹಾಯವಾಣಿ:
ಕಲ್ಲೂರು ಮಂಡಲದ ಚಿನ್ನೇಕೂರು ಗ್ರಾಮದಲ್ಲಿ ಸಂಭವಿಸಿದ ಖಾಸಗಿ ಟ್ರಾವೆಲ್್ಸ ಬಸ್ ಬೆಂಕಿಗಾಹುತಿಗೆ ಸಂಬಂಧಿಸಿದಂತೆ, ಹಲವಾರು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಮಾಹಿತಿ ಮತ್ತು ಸಹಾಯಕ್ಕಾಗಿ ಬಾಧಿತ ಕುಟುಂಬಗಳ ಸದಸ್ಯರು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕರ್ನೂಲ್ ಜಿಲ್ಲಾಧಿಕಾರಿ ಡಾ. ಎ. ಸಿರಿ ಅವರು ತಿಳಿಸಿದ್ದಾರೆ.
ಕರ್ನೂಲ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ: 08518-277305
ಕರ್ನೂಲ್ ಸರ್ಕಾರಿ ಆಸ್ಪತ್ರೆ- 9121101059, 9494609814, 9052951010
ಅಪಘಾತ ಸ್ಥಳ ನಿಯಂತ್ರಣ ಕೊಠಡಿ: 9121101061
ಕರ್ನೂಲ್ ಪೊಲೀಸ್ ಕಚೇರಿ ನಿಯಂತ್ರಣ ಕೊಠಡಿ: 9121101075
