ಬೆಂಗಳೂರು, ಅ.24- ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿಕೆ ವೈಯಕ್ತಿಕವಾಗಿದ್ದು, ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸಿ, ಮುಂದೆ ಅಹಿಂದ ನಾಯಕ ಎಂದು ಹೇಳಿದ್ದಾರೆ. ಅವರು ಎರಡೂವರೆ ವರ್ಷಗಳ ನಂತರ ಆಗಬಹುದು. ನಾಳೆಯೇ ಜಾರಕಿಹೊಳಿ ಅವರು ಸಿಎಂ ಆಗುತ್ತಾರೆ ಎಂದೇನು ಹೇಳಿಲ್ಲ. 2028 ಕ್ಕೆ ಸಿಎಂ ಆಗಬಹುದು ಎಂದು ಹೇಳಿದ್ದಾರೆ ಎಂದರು.
ನಾನು ಸಿಎಂ ಆಕಾಂಕ್ಷಿ ಅಲ್ಲ ಅಂದಿದ್ದಾರೆ. ಆ ದೃಷ್ಟಿಯಿಂದ ಯತೀಂದ್ರ ಹೇಳಿರಬಹುದು. ಹೈಕಮಾಂಡ್‌ಗಿಂತ ಯತೀಂದ್ರ ಪವರ್ ಫುಲ್ ಅಂತೇನೂ ಇಲ್ಲ. ಆದರೆ, ಯತೀಂದ್ರ ಅವರ ಮಾತಿನಲ್ಲಿ ತಪ್ಪೇನೂ ಇಲ್ಲ. ಇದು ಮುಖ್ಯಮಂತ್ರಿಯವರ ಹೇಳಿಕೆಯಲ್ಲ. ನಮಗೂ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂಬುದು ಇದೆ ಎಂದು ಅವರು ತಿಳಿಸಿದರು.
ಈ ರೀತಿ ಹೇಳಿದ್ದರೂ ಯತೀಂದ್ರ ಅವರಿಗೆ ನೋಟಿಸ್ ಕೊಟ್ಟಿಲ್ಲವೆಂಬ ಪ್ರಶ್ನೆಗೆ ಪ್ರಕ್ರಿಯಿಸಿದ ಸಚಿವರು, ಅದನ್ನು ಪಕ್ಷದ ಅಧ್ಯಕ್ಷರು ಮಾಡುತ್ತಾರೆ. ಯಾರಾದರೂ ಮಾತನಾಡಿದರೆ ನೊಟೀಸ್ ಕೊಡುವುದಾಗಿ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನೂ ಇಲ್ಲ. ನಾನು ಹೋಗುತ್ತೇನೆ, ನೀವು ಹೋಗುತ್ತಿರಾ,? ಅವರಿಗೆ ಏನೋ ಹರಕೆ ಇರಬಹುದು. ಅದನ್ನು ತೀರಿಸಲು ಹೋಗಿರಬಹುದು ಎಂದು ಅವರು ಹೇಳಿದರು.
ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕಾಂಗ ಪಕ್ಷದ ಸಭೆ ಕರೆದು ತೀರ್ಮಾನಿಸಲಾಗುತ್ತದೆ. ಶಾಸಕರು ಯಾರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುತ್ತಾರೋ ಅವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಗುತ್ತದೆ. ಈಗ ಮುಖ್ಯಮಂತ್ರಿ ಇರುವುದರಿಂದ ಏಕೆ? ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.
