Thursday, October 23, 2025
Homeರಾಜ್ಯಕಾಂಗ್ರೆಸ್‌‍ನಲ್ಲಿ ನಾಯಕತ್ವ ಕೊರತೆ ಇಲ್ಲ : ಎಂ.ಬಿ.ಪಾಟೀಲ್‌

ಕಾಂಗ್ರೆಸ್‌‍ನಲ್ಲಿ ನಾಯಕತ್ವ ಕೊರತೆ ಇಲ್ಲ : ಎಂ.ಬಿ.ಪಾಟೀಲ್‌

There is no leadership shortage in Congress: M.B. Patil

ಬೆಂಗಳೂರು, ಅ.23- ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌‍ನಲ್ಲಿ ಬಹಳಷ್ಟು ನಾಯಕರು ಸಮರ್ಥರಿದ್ದಾರೆ. ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಲು ಎಲ್ಲರಿಗೂ ಆಸೆ ಇರುತ್ತದೆ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ನಮಲ್ಲಿ ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ ಸೇರಿದಂತೆ ಎಲ್ಲರೂ ಸಮರ್ಥರಿದ್ದಾರೆ. ಬಿಜೆಪಿಯಂತೆ ನಮಲ್ಲಿ ನಾಯಕತ್ವದ ಕೊರತೆಯಿಲ್ಲ ಎಂದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸದ್ಯಕ್ಕೆ ನಮಲ್ಲಿ ಯಾವುದೇ ಚರ್ಚೆಗಳಿಲ್ಲ. ಸ್ವಯಂ ಘೋಷಣೆ ಮಾಡಿ ತಾವು ಮುಖ್ಯಮಂತ್ರಿ ಎಂದು ಹೇಳಿಕೊಂಡರೆ ಆಗುವುದಿಲ್ಲ, ಜನರ ಅಭಿಪ್ರಾಯ ಇರಬೇಕು, ಶಾಸಕರು ಬೆಂಬಲ ನೀಡಬೇಕು. ಆ ಬಳಿಕ ಹೈಕಮಾಂಡ್‌ ಪರಿಶೀಲಿಸಿ, ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ನಮ ಹಂತದಲ್ಲಿ ಇಂತಹ ವಿಚಾರಗಳು ಚರ್ಚೆಯಾಗುವುದು ಅನಗತ್ಯ. ಖಾತೆ ಬದಲಾವಣೆ ಬಗ್ಗೆಯೂ ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ಹಾಗೆ ಇಂತಹದೇ ಖಾತೆ ಬೇಕು ಎಂದು ಕೇಳಲು ಸಾಧ್ಯವಿಲ್ಲ. ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಯವರು ಈ ವಿಚಾರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ರಾಷ್ಟ್ರೀಯ ವಿಮಾನಾಭಿವೃದ್ಧಿ ಪ್ರಾಧಿಕಾರ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಅಧ್ಯಯನ ಮಾಡಿಕೊಂಡು ಹೋಗಿದೆ. ವರದಿ ನೀಡಿ ಅಭಿಪ್ರಾಯ ತಿಳಿಸಿದ ಬಳಿಕ ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು.

ಇತ್ತೀಚೆಗೆ ನೋಯ್ಡಾದಲ್ಲಿ ನಿರ್ಮಿಸಲಾದ ಜೇವರ್‌ ವಿಮಾನ ನಿಲ್ದಾಣ ಹಾಗೂ ನೆವಿ ಮುಂಬೈನಲ್ಲಿ ವಿಮಾನ ನಿಲ್ದಾಣ ನಿರ್ಮಿಸಿರುವ ಸಂಸ್ಥೆಗಳಿಂದ ತಜ್ಞರ ವರದಿ ಪಡೆದು, ನಂತರ ಸ್ಥಳ ಆಯ್ಕೆ ನಡೆಸಲಾಗುವುದು. ಎಲ್ಲವೂ ಅಂತಿಮಗೊಂಡ ಬಳಿಕ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು.

2033ರ ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 5 ವರ್ಷ ಬೇಕಾಗುತ್ತದೆ. 150 ಕಿ.ಮೀ ಅಂತರದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರಬಾರದು ಎಂಬ ನಿಯಮ ಇದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡಿದ್ದೇವೆ. ದಕ್ಷಿಣದಲ್ಲಿ ಹೊಸೂರು ಭಾಗಕ್ಕೆ ಸಂಪರ್ಕಿಸಲು ಇತ್ತ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕಿಸುವ ನಿಟ್ಟಿನಲ್ಲೂ ವಿಮಾನ ನಿಲ್ದಾಣದ ಸ್ಥಳ ಆಯ್ಕೆ ಮಾಡಬೇಕೆಂಬ ಒತ್ತಾಯವಿದೆ. ಆದರೆ ನಾವು ಯಾವುದೇ ಒತ್ತಡಕ್ಕೆ ಮಣಿಯದೇ ಜೇಷ್ಠತೆ ಆಧಾರದ ಮೇಲೆ ಸೂಕ್ತ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಸರ್ಕಾರದ ಸ್ವತ್ತುಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳು ನಡೆಸಲು ಅನುಮತಿ ಪಡೆಯಬೇಕು ಎಂಬ ಸುತ್ತೋಲೆ ಆರ್‌ಎಸ್‌‍ಎಸ್‌‍ ಸಂಸ್ಥೆಗಷ್ಟೇ ಅಲ್ಲ. ನಾವು ಬಸವ ಅಭಿಯಾನ ಮಾಡಿದರೂ ಕೂಡ ಅನ್ವಯವಾಗುತ್ತದೆ ಎಂದು ಎಂ.ಬಿ.ಪಾಟೀಲ್‌ ಹೇಳಿದರು.

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಚರ್ಚೆ ಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕ ಸಭೆ ಕರೆದರೆ ನಾನು, ಸಚಿವ ಪ್ರಿಯಾಂಕ ಖರ್ಗೆ ಭಾಗವಹಿಸುತ್ತೇವೆ, ನಮ ಸಲಹೆಗಳನ್ನು ನೀಡುತ್ತೇವೆ. ರಸ್ತೆ ದುರಸ್ತಿ ಮೇಲ್ಸೇತುವೆ, ಕೆಳ ಸೇತುವೆ, ಕಸ ವಿಲೇವಾರಿ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಮಧ್ಯಮವದಿ, ಧೀರ್ಘಾವದಿ ಪರಿಹಾರದ ಸಲಹೆಗಳನ್ನು ನೀಡುತ್ತೇವೆ.

ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಇತ್ತೀಚೆಗೆ ತಮನ್ನು ಭೇಟಿ ಮಾಡಿ, ಚರ್ಚೆ ಮಾಡಿದ್ದಾರೆ. ಅವರು ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆದಿರುವುದು ತಪ್ಪಲ್ಲ, ಸರ್ಕಾರ ಒಂದು ಸಾವಿರ ಕೋಟಿ ರೂ.ಗಳನ್ನು ಕೊಟ್ಟು ಅಭಿವೃದ್ಧಿಯನ್ನು ಆರಂಭಿಸಿದೆ. ನಿರ್ಲಕ್ಷತೆ ವಹಿಸಿದರೆ, ಟೀಕೆ ಮಾಡಬಹುದು. ಆದರೆ ನಾವು ಜಾಗರೂಕರಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

RELATED ARTICLES

Latest News