Thursday, October 23, 2025
Homeರಾಜ್ಯಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಪತ್ತೆ-ಹತ್ಯೆ ಜಾಲ ಪತ್ತೆ, ಅಧಿಕಾರಿಗಳ ದಾಳಿ

ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಪತ್ತೆ-ಹತ್ಯೆ ಜಾಲ ಪತ್ತೆ, ಅಧಿಕಾರಿಗಳ ದಾಳಿ

Fetal detection-murder racket unearthed in Mysore and Mandya districts

ಬೆಂಗಳೂರು, ಅ.23- ಕಟ್ಟುನಿಟ್ಟಿನ ನಿಯಮಗಳು ಹಾಗೂ ಜಾಗೃತಿಯ ಹೊರತಾಗಿಯೂ ರಾಜ್ಯದಲ್ಲಿ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ವರದಿಯಾಗುತ್ತಲೇ ಇವೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ರಹಸ್ಯ ಕಾರ್ಯಾಚರಣೆ ನಡೆಸಿ ಅಮಾನವೀಯವಾದ ಭ್ರೂಣಹತ್ಯೆ ಜಾಲವೊಂದನ್ನು ಪತ್ತೆ ಹಚ್ಚಿದ್ದು, 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಪಿ.ಸಿ ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್‌ ಹಾಗೂ ಕೆಪಿಎಂಇಎ ಉಪ ನಿರ್ದೇಶಕ ಡಾ.ದೊರೆ ಅವರು ಭಾಗವಹಿಸಿದರು.

ಮೋಹನ್‌ ಮತ್ತು ದೊರೆ ಅವರು ಸಮಾಜ ಕಲ್ಯಾಣಾ ಇಲಾಖೆ ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಡಾ. ಬೆಟ್ಟಸ್ವಾಮಿ ಅವರೊಂದಿಗೆ ಖಚಿತ ಮಾಹಿತಿಯ ಮೇರೆಗೆ ಲಿಂಗಪತ್ತೆ ಹಾಗೂ ಭ್ರೂಣಹತ್ಯೆಗಾಗಿ ತೆರಳುತ್ತಿದ್ದ ಪುಟ್ಟಸಿದ್ದಮ ಎಂಬ ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಆಕೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಮತ್ತೇ ಹೆಣ್ಣು ಮಗುವೇ ಜನಿಸಿದರೆ ಕೌಟುಂಬಿಕ ಸಮಸ್ಯೆಗಳಾಗಬಹುದು ಎಂಬ ಕಾರಣಕ್ಕೆ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ.

ಸ್ವಾಮಿ ಎಂಬುವರು ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸಿದ್ದು, ಮಹಿಳೆಯನ್ನು ಒಪ್ಪಿಸಿ ಹಣ ಪಡೆದು, ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯ ಮೊಬೈಲ್‌ ಸಂಖ್ಯೆಯನ್ನು ಜಿಪಿಎಸ್‌‍ ಟ್ರ್ಯಾಕರ್‌ಗೆ ಅಳವಡಿಸಿ, ಅದರ ಸಹಾಯದಿಂದ ಹಿಂಬಾಲಿಸಿದ ಅಧಿಕಾರಿಗಳ ತಂಡ ಹಾರೋಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಹಾಗೂ ಹನುಗನಹಳ್ಳಿ ಅಂಚಿನ ಒಂದು ಮನೆಗೆ ಮಹಿಳೆ ತಲುಪಿದ್ದಾರೆ. ಅಧಿಕಾರಿಗಳ ತಂಡ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಗೋವಿಂದರಾಜು ಎಂಬ 25 ವಯಸ್ಸಿನ ಯುವಕ ಇದ್ದು, ಆತ ಇಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ತಿಳಿಸಿದ್ದಾನೆ.

ಗೊಂದಲಕ್ಕೊಳಗಾದ ಅಧಿಕಾರಿಗಳು ಇನ್ನೇನೂ ವಾಪಸ್‌‍ ಬರಬೇಕು ಎನ್ನುವ ಹಂತದಲ್ಲಿ ಅನುಮಾನಗೊಂಡು ಎರಡನೇ ಮಹಡಿಗೆ ತಲುಪಿದ್ದಾರೆ. ಅಲ್ಲಿ ರೂಪ ಮತ್ತು ಉಮಾ ಎಂಬ ಇಬ್ಬರು ಮಹಿಳೆಯರು ಹಾಗೂ ಮಕ್ಕಳು ಕಂಡುಬಂದಿದ್ದಾರೆ. ಅವರನ್ನು ವಿಚಾರಿಸಿದಾಗ ಅಜ್ಜಿಯ ತಿಥಿಗಾಗಿ ಬಂದಿರುವುದಾಗಿ ಹೇಳಿದ್ದಾರೆ. ಸ್ಥಳ ಪರಿಶೀಲನೆ ಮಾಡಿದಾಗ ಅಲ್ಲಿ ಬನ್ನೂರಿನ ಎಸ್‌‍.ಕೆ. ಆಸ್ಪತ್ರೆಗೆ ಸಂಬಂಧಿಸಿದ ಕೆಲವು ಬಿಲ್‌ಗಳು ಮತ್ತು ದಾಖಲಾತಿಗಳು ಪತ್ತೆಯಾಗಿವೆ. ಜೊತೆಗೆ ಹತ್ತಿ ಬಟ್ಟೆ, ಇಂಜೆಕ್ಷನ್‌, ಮಾತ್ರೆಗಳು ಕಂಡು ಬಂದಿವೆ.

ಅಲ್ಲಿನ ಶ್ಯಾಮಲಾ ಎಂಬುವರನ್ನು ವಿಚಾರಿಸಿದಾಗ ಆಕೆ ತಾನು ಎಸ್‌‍.ಕೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಬಿಎಸ್‌‍ಸಿ ನರ್ಸಿಂಗ್‌ ಮಾಡಿದ್ದೇನೆ. ಪತಿ ಕಾರ್ತಿಕ್‌ ಹಾಗೂ ಪುಟ್ಟರಾಜು ಎಂಬುವರೊಂದಿಗೆ ಸೇರಿಕೊಂಡು ಲಿಂಗಪತ್ತೆ ಹಾಗೂ ಭ್ರೂಣಹತ್ಯೆ ಕಾರ್ಯಾಚರಣೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.

ಅಲ್ಲಿದ್ದ ಮಹಿಳೆಯರಾದ ರೂಪ ಮತ್ತು ಉಮಾ ಅವರು ಕೂಡ ತಮ ಮನೆಯವರೇ ಈ ಕೆಲಸಕ್ಕೆ ಒಪ್ಪಿಕೊಂಡು ಹಣ ಕೊಟ್ಟು ಕಳುಹಿಸಿದ್ದಾರೆ. ಈಗಾಗಲೇ ತಲಾ 30 ಸಾವಿರ ರೂ.ಗಳನ್ನು ಕೊಟ್ಟಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರ ಆಧಾರದ ಮೇಲೆ ಸ್ವಾಮಿ. ಗೋವಿಂದರಾಜು, ಶ್ಯಾಮಲಾ, ಕಾರ್ತಿಕ್‌, ಪುಟ್ಟರಾಜ್‌, ಉಮಾ ಅವರ ಪತಿ ಶಿವಕುಮಾರ್‌, ರೂಪಾ ಅವರ ಪತಿ ಹರೀಶ್‌ ನಾಯ್‌್ಕ ಅವರ ವಿರುದ್ಧ ಮೈಸೂರು ಜಿಲ್ಲೆಯ ವರುಣಾ ಪೊಲೀಸ್‌‍ ಠಾಣೆಯಲ್ಲಿ ಬಿಎನ್‌ಎಸ್‌‍ ಕಲಂ 88, 91, 62 ಹಾಗೂ ಎಂಪಿಟಿಪಿ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಅಧಿಕಾರಿಗಳ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಬನ್ನೂರು ಹೈವೇ ಬಳಿಯ ಹುನುಗನಹಳ್ಳಿ ಫಾರಂ ಹೌಸ್‌‍ನಲ್ಲಿ ಲಿಂಗ ಭ್ರೂಣಪತ್ತೆ ಕಾರ್ಯ ನಡೆಯುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ರಹಸ್ಯ ಕಾರ್ಯಾಚರಣೆ ಮೂಲಕ ನಮ ಆರೋಗ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭ್ರೂಣ ಹಂತಕರನ್ನು ಸೆರೆಹಿಡಿದಿದ್ದಾರೆ. ಗರ್ಭಿಣಿ ಮಹಿಳೆಯ ಸಹಾಯ ಪಡೆದು ಲಿಂಗ ಭ್ರೂಣ ಪತ್ತೆ ಕಾರ್ಯಚಟುವಟಿಕೆ ನಡೆಸುತ್ತಿರುವುದನ್ನು ಪತ್ತೆ ಡಲಾಗಿದೆ.

ಕಾರ್ಯಾಚರಣೆ ವೇಳೆ ನಾಲ್ಕು ಗರ್ಭಿಣಿ ಸ್ತ್ರೀಯರು ಲಿಂಗ ಭ್ರೂಣ ಪತ್ತೆ ಮಾಡಿಸಿಕೊಳ್ಳಲು ಹಾಜರಿರುವುದು ಹಾಗೂ ಸ್ಕ್ಯಾನಿಂಗ್‌ ಬಳಕೆ ಮಾಡುವ ಉಪಕರಣವು ಕಂಡು ಬಂದಿದೆ. ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ (ಪಿ.ಸಿ.ಪಿ.ಎನ್‌.ಡಿ.ಟಿ) ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಹೆಣ್ಣು ಭ್ರೂಣಹತ್ಯೆ ವಿರುದ್ಧ ಆರೋಗ್ಯ ಇಲಾಖೆ ನಿರಂತರ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ಸಮಾಜ ಈ ಬಗ್ಗೆ ಜಾಗೃತರಾಗಿ ಭ್ರೂಣಹತ್ಯೆಯ ವಿರುದ್ಧ ಸಮರ ಸಾರಲು ಮುಂದಾಗಬೇಕು. ಆರೋಗ್ಯ ಇಲಾಖೆ ಸದಾ ಭ್ರೂಣ ಹಂತಕರ ವಿರುದ್ಧ ಸಹಕರಿಸುವವರ ಜೊತೆಯಿದೆ. ಯಾರು ಎಷ್ಟೇ ದೊಡ್ಡವರಿದ್ದರು, ಹೆಣ್ಣು ಭ್ರೂಣ ಹಂತಕರನ್ನು ಮಟ್ಟಹಾಕಲು ನಮ ಸರ್ಕಾರ ಕಟಿಬದ್ಧವಾಗಿದೆ ಎಂದಿದ್ದಾರೆ.

RELATED ARTICLES

Latest News