Saturday, October 25, 2025
Homeಬೆಂಗಳೂರುಬೆಂಗಳೂರು : ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್‌ ಸ್ಟೋಟ, ವೃದ್ಧೆ ಸಾವು, ಮನೆ ನೆಲಸಮ

ಬೆಂಗಳೂರು : ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್‌ ಸ್ಟೋಟ, ವೃದ್ಧೆ ಸಾವು, ಮನೆ ನೆಲಸಮ

Gas cylinder explosion in Bengaluru, elderly woman dies, house razed

ಬೆಂಗಳೂರು,ಅ.25– ಮನೆಯೊಂದರಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಪೋಟಗೊಂಡ ಪರಿಣಾಮ ಬೃಹತ್‌ ಕಟ್ಟಡವೇ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಗರದಲ್ಲಿ ನಡೆದಿದೆ.

ಅಕ್ಕಯ್ಯಮ (80) ಮೃತಪಟ್ಟ ವೃದ್ಧೆ. ಈ ದುರಂತದಲ್ಲಿ ಕುಟುಂಬದ ಶೇಖರ್‌(52), ಕಿರಣ್‌ಕುಮಾರ್‌ (22) ಮತ್ತು ಚಂದನ್‌ (25) ಎಂಬುವವರು ಗಂಭೀರ ಗಾಯಗೊಂಡಿದ್ದು, ಈ ಪೈಕಿ ಚಂದನ್‌ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಟಿಸಿಇ ಪಾಳ್ಯದ ಆಲ್ಟರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆ.ಆರ್‌ಪುರಂ ಪೊಲೀಸ್‌‍ ಠಾಣೆ ವ್ಯಾಪ್ತಿಯ ತ್ರಿವೇಣಿ ನಗರದ ಮನೆಯೊಂದರಲ್ಲಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಪೋಟಗೊಂಡು ಈ ದುರ್ಘಟನೆ ಸಂಭವಿಸಿದೆ.

ಸ್ಪೋಟದ ತೀವ್ರತೆಗೆ ಈ ಮನೆಯ ಹಿಂಭಾಗದ ಮೂರು ಶೆಡ್‌ ಮನೆಗಳಿಗೂ ಹಾನಿಯಾಗಿದ್ದು, ಶೆಡ್‌ನಲ್ಲಿದ್ದ ಮಹಿಳೆ ಕಾಂಚನಾ ಎಂಬುವವರ ತಲೆಗೆ ಗಾಯವಾಗಿದ್ದು, ಅವರನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳದಲ್ಲಿದ್ದ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಯಲ್ಲಿ ಅಕ್ಕಪಕ್ಕದ ಮನೆಗಳ ಕಿಟಕಿಗಳು ಹಾನಿಯಾಗಿವೆ, ಗೋಡೆಗಳು ಬಿರುಕು ಬಿಟ್ಟಿವೆ. ಸುದ್ದಿ ತಿಳಿದು ಸ್ಥಳಕ್ಕೆ ಕೆಆರ್‌ಪುರಂ ಠಾಣೆ ಪೊಲೀಸರು ಹಾಗೂ ಬಾಂಬ್‌ ನಿಗ್ರಹ ದಳ ಹಾಗೂ ಶ್ವಾನದಳ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಭೀಕರ ಸ್ಪೋಟಕ್ಕೆ ಕಾರಣವೇನೆಂಬುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಟೋಟಗೊಂಡಿದೆ. ತಜ್ಞರ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News