ಬೆಂಗಳೂರು,ನ.27- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾದರ್ಶನ ನಡೆಸುವ ಮೊದಲು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಸಾರ್ವಜನಿಕರಿಗೆ ದರ್ಶನ ಮಾಡಿಸಲಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಯಾಗಿ ಏಳು ತಿಂಗಳಾದರೂ ಈಗಲೂ ಸಚಿವರು ಯಾರು ಎಂಬುದು ಜನರಿಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ನಡೆಸುತ್ತಿರುವುದು ಜನತಾದರ್ಶನವಲ್ಲ. ಅದೊಂದು ಬೋಗಸ್ ದರ್ಶನ. ಮೊದಲು ಸಂಪುಟದ ಸಚಿವರನ್ನು ಜನತೆಗೆ ಪರಿಚಯ ಮಾಡಿ ಎಂದು ತಿರುಗೇಟು ನೀಡಿದರು.
ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ನಾವು ,ಜೆಡಿಎಸ್ ಶಾಸಕರು ಸೇರಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು. ಸುಮ್ಮನೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವ ಮೊದಲು ನೀವು ಹಣ ಕೊಡಿ, ಬಳಿಕ ಕೇಂದ್ರ ಸರ್ಕಾರ ಹಣ ಕೊಡಲಿದೆ ಎಂದು ಹೇಳಿದರು.
ಇವತ್ತು ಸಿದ್ದರಾಮಯ್ಯ ಸರ್ಕಾರ ನಿದ್ದೆಯಿಂದ ಎದ್ದಿದೆ. ಇಷ್ಟು ದಿನ ಎದ್ದಿಲ್ಲ..ಈಗ ಎದ್ದಿದ್ದೇವೆ ಎಂದು ಜನಾತದರ್ಶನ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅಶೋಕ್, ಸಿಎಂ ಜನತಾದರ್ಶನ ಒಂದು ಬೋಗಸ್ ದರ್ಶನ. ಇವರು ಒಬ್ಬರು ಜನತಾದರ್ಶನ ಮಾಡಿದರೆ ಸಾಕಾ, ಸಚಿವರು ಯಾರು ಕಾಣಿಸುತ್ತಿಲ್ಲ ಎಂದು ಟೀಕಿಸಿದರು.
ರೈತರ ಸಮಸ್ಯೆ ಬಗೆಹರಿಸುವ ಬದಲು ಎಲ್ಲ ಸಚಿವರು ತೆಲಂಗಾಣ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ. ಕುಡಿಯುವ ನೀರು,ಮೇವು ಯಾವುದು ಸಿಗುತ್ತಿಲ್ಲ. ಮೇವು ಖರೀದಿ ಮಾಡಲು ಇನ್ನು ಸರ್ಕಾರ ಅನುಮತಿ ನೀಡಿಲ್ಲ. ಇದೊಂದು ಎಡಬಿಡಂಗಿ ಸರ್ಕಾರ ಎಂದು ಲೇವಡಿ ಮಾಡಿದ್ದಾರೆ.
ಡಿಸಂಬರ್‌ನಲ್ಲಿ ಆಗಲಿವೆ ಹಲವಾರು ಮಹತ್ವದ ಬದಲಾವಣೆಗಳು
ಕೇಂದ್ರ ನಾಯಕರು ಮೇಲೆ ಬಿಜೆಪಿ ಸಂಸದರು ಒತ್ತಡ ಹಾಕಲಿ ಎಂಬ ಕೈ ನಾಯಕರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನಲ್ಲಿ ದೃಷ್ಟಿ ಬೊಟ್ಟು ಇದ್ದಾಂಗೆ ಇದ್ದಾರಲ್ವಾ. ಅವರು ಏನು ಮಾಡ್ತಿದ್ದಾರೆ? ಎಂದು ಪರೋಕ್ಷವಾಗಿ ಸಂಸದ ಡಿ.ಕೆ ಸುರೇಶ್‍ಗೆ ಬೊಟ್ಟು ಮಾಡಿದರು.
ಬಿಜೆಪಿಯವರು ಬ್ರಿಟಿಷ್‍ರು ಇದ್ದಾಂಗೆ ಕಾಂಗ್ರೆಸ್ ಶಾಸಲ ಬಾಲಕೃಷ್ಣ ಹೇಳಿಕೆಗೆ , ಬಾಲಕೃಷ್ಣ ಅವರು ಬಿಜೆಪಿಯಲ್ಲಿದ್ದರಯ ಬಳಿಕ ಜೆಡಿಎಸ್‍ನಲಿದ್ದರು. ಈಗ ಕಾಂಗ್ರೆಸ್‍ನಲ್ಲಿದ್ದಾರೆ ಅವರು ಮೂರು ಸಿದ್ದಾಂತದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷದ ಸ್ಥಾಪನೆ ಮಾಡಿದ್ದೆ ಬ್ರಿಟಿಷರು ಎಂದರು.
ದೇವೇಗೌಡರ ಜೊತೆ ಇದ್ದಾಗ ಅಪ್ಪಾಜಿ ಅಂದರು. ಬಿಜೆಪಿಯಲ್ಲಿದ್ದಾಗ ದೇವರು ಎಂದರು, ಈಗ ಕಾಂಗ್ರೆಸ್ ನಲ್ಲಿದ್ದಾರೆ ಕೋಮುವಾದಿ ಎನ್ನುತ್ತಾರೆ ಎಂದು ಅಪಹಾಸ್ಯ ಮಾಡಿದರು.