ಬೆಂಗಳೂರು,ಅ.27-ವಿದೇಶಿ ಹ್ಯಾಕರ್ಗಳ ಸಹಾಯದೊಂದಿಗೆ ಖಾಸಗಿ ಫೈನಾನ್ಸ್ ಸಂಸ್ಥೆ ಯೊಂದರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ 48 ಕೋಟಿ ಹಣವನ್ನು ಲಪಟಾಯಿಸಿದ್ದ ಇಬ್ಬರು ಖತರ್ನಾಕ್ ವಂಚಕರನ್ನು ಬಂಧಿಸುವಲ್ಲಿ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಬಂಧಿತ ವಂಚಕರನ್ನು ರಾಜಸ್ತಾನ ಮೂಲದ ಸಂಜಯ್ ಪಟೇಲ್ (43) ಹಾಗೂ ಬೆಳಗಾವಿಯ ಇಸಾಯಿಲ್ ರಶೀದ್ ಅತ್ತರ್(27) ಎಂದು ಗುರುತಿಸಲಾಗಿದೆ.ಸಂಜಯ್ ಪಟೇಲ್ ಕೇವಲ 8ನೇ ತರಗತಿ ವ್ಯಾಸಂಗ ಮಾಡಿದ್ದು, ವೃತ್ತಿಯಲ್ಲಿ ಪ್ಲಂಬರ್. ಮತ್ತೊಬ್ಬ ಆರೋಪಿ 10ನೇ ತರಗತಿ ವ್ಯಾಸಂಗ ಮಾಡಿದ್ದು, ಡಿಜಿಟಲ್ ಮಾರ್ಕೆಟಿಂಗ್ ವೃತ್ತಿ ಮಾಡುತ್ತಿದ್ದನು. ಇವರಿಬ್ಬರು ಕಡಿಮೆ ವ್ಯಾಸಂಗ ಮಾಡಿದ್ದರೂ ಸೈಬರ್ ವಂಚನೆಯಲ್ಲಿ ಪ್ರವೀಣರು.
ನಗರದ ವಿಜ್ಡಮ್ ನೋಡಲ್ ಫೈನಾನ್ಸ್ ಕಂಪನಿಯ ಬ್ಯಾಂಕ್ನ ಹಲವು ಖಾತೆಗಳಲ್ಲಿ ಅನುಮಾನಾಸ್ಪದ ಹಣ ವರ್ಗಾವಣೆ ಕುರಿತಂತೆ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣಗೆ ಇಳಿದ ಸೈಬರ್ ಕ್ರೈಂ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಗಳು ಹಾಂಗ್ಕಾಂಗ್ ಮೂಲದ ಹ್ಯಾಕರ್ಗಳನ್ನು ನೇಮಿಸಿಕೊಂಡು ವಿಜ್ಡಮ್ ಸಂಸ್ಥೆಯ ಬ್ಯಾಂಕ್ ಖಾತೆಗಳ ಎಪಿಐಗಳನ್ನು ಬದಲಾಯಿಸಿ ನಕಲಿ ಐಪಿ ವಿಳಾಸಗಳ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿದ್ದರು.
ಈ ಹಣದ ವ್ಯವಹಾರಗಳು ಕಂಪನಿಯ ಅಧಿಕೃತ ಸಿಸ್ಟಂ ಅಥವಾ ವೈಟ್ಲಿಸ್ಟೆಡ್ ಐಪಿ ವಿಳಾಸಗಳ ಮೂಲಕ ನಡೆದಿಲ್ಲ. ಬದಲಾಗಿ ಭಾರತದ ಹೊರಗಿನ ಐಪಿ ಅಡ್ರೆಸ್ಗಳ ಮೂಲಕ ನಡೆದಿರುವುದನ್ನು ಪತ್ತೆ ಹಚ್ಚಿ ಸುಮಾರು 47 ಕೋಟಿ ಹಣವನ್ನು ಕಂಪನಿಯ ಖಾತೆಗಳಿಂದ ಅನಧಿಕೃತವಾಗಿ ಇತರೆ ಖಾತೆಗಳಿಗೆ ವರ್ಗಾಯಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೊಲೀಸ್ ತನಿಖೆಯಲ್ಲಿ ವಿಜ್ಡಮ್ ಸಂಸ್ಥೆಯ ಬ್ಯಾಂಕ್ ಖಾತೆಗಳಿಂದ ಮಧ್ಯರಾತ್ರಿಯಲ್ಲಿ 1782 ವ್ಯವಹಾರಗಳ ಮೂಲಕ 656 ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂಬುವುದು ತಿಳಿದು ಬಂದಿದೆ.
ಲೂಟಿ ಮಾಡಿದ ಹಣದಲ್ಲಿ 27.39 ಲಕ್ಷ ಹಣ ನೇರವಾಗಿ ವ್ಯಕ್ತಿಯೊಬ್ಬರ ಎಸ್ಬಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಲ್ಪಟ್ಟಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೋಟಿ ಕೋಟಿ ಹಣ ಲೂಟಿ ಹೊಡೆದಿರುವ ಸೈಬರ್ ವಂಚನೆಯ ಜಾಲದ ಮೂಲ ಶೋಧಿಸಲು ಮುಂದಾಗಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಸಂಸ್ಥೆಯ ಖಾತೆಯೊಂದರಿಂದ 5.5ಕೋಟಿ ಹಣವನ್ನು ಹೈದರಾಬಾದ್ನ ಎಕಲಾನ್ ಸೈನ್್ಸನ ಖಾತೆಗೆ ವರ್ಗಾಯಿಸಿ ನಂತರ ಫ್ಲೀಪೋ ಪೇ (ಐಡಿಎಫ್ಸಿ ಬ್ಯಾಂಕ್ ಖಾತೆಗೆ ) ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ.
ಎಕಲಾನ್ ಸೈನ್್ಸ ಸಂಸ್ಥೆಯ ವೆಬ್ನಿ ಡಾಟಾ ಸೆಂಟರ್ ಸೇರಿದ ಐಪಿ ಅಡ್ರೆಸ್ಗಳ ಮೂಲಕ ವ್ಯವಹಾರಗಳನ್ನು ನಡೆಸಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಈ ಐಪಿ ಅಡ್ರೆಸ್ನ್ನು ಮತ್ತೊಬ್ಬ ವ್ಯಕ್ತಿ ಖರೀದಿಸಿರುವುದು ತಿಳಿದು ಬಂದಿದ್ದು, ಆತನನ್ನು ಬಂಧಿಸಲಾಗಿದೆ.ದುಬೈನಲ್ಲಿ ನೆಲೆಸಿರುವ ಇಬ್ಬರು ಈತನ ನೆರವಿನಲ್ಲಿ ಐದು ಸರ್ವರ್ಗಳನ್ನು ಬಾಡಿಗೆಗೆ ಪಡೆದುಕೊಂಡಿರುವುದನ್ನು ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿದ್ದಾರೆ.
ತನಿಖೆ ವೇಳೆ ದುಬೈ ಮೂಲದ ಇಬ್ಬರು ವ್ಯಕ್ತಿಗಳು ಹಾಂಗ್ಕಾಂಗ್ ಆಧಾರಿತ ಹ್ಯಾಕರ್ಗಳನ್ನು ನೇಮಿಸಿ, ಬ್ಯಾಂಕ್ನ ಎಪಿಐಗಳನ್ನು ಬದಲಾಯಿಸಿ ಬ್ಯಾಂಕ್ನ ಭದ್ರತಾ ಸಾಫ್್ಟವೇರ್ಗಳನ್ನು ತಪ್ಪಿಸಲು ಪ್ರಯತ್ನಿಸಿದ್ದು, ಹಾಂಗ್ಕಾಂಗ್ ಮತ್ತು ಲಿತುವೇನಿಯಾ ಆಧಾರಿತ ಐಪಿ ಅಡ್ರೆಸ್ಗಳ ಮೂಲಕ ವಿಜ್ಡಮ್ ಫೈನಾನ್್ಸ ಕಂಪನಿಯ ಖಾತೆಗಳಿಂದ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬುವುದು ದೃಢಪಟ್ಟಿದೆ.
ಈ ಐಪಿ ಅಡ್ರೆಸ್ಗಳು ಐದು ಸರ್ವರ್ಗಳ ಭಾಗವಾಗಿದ್ದವು ಎಂಬುವುದು ತನಿಖೆಯಿಂದ ಬಹಿರಂಗವಾಗಿದೆ. 48 ಕೋಟಿ ರೂ.ಗಳ ಸೈಬರ್ ವಂಚನೆ ಪ್ರಕರಣವನ್ನು ಬೇದಿಸಿರುವ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದ ಸೈಬರ್ ಕ್ರೈಂ ಪೊಲೀಸರ ಕಾರ್ಯಾಚರಣೆಯನ್ನು ಕಮಿಷನರ್ ಸೀಮಂತ್ಕುಮಾರ್ ಸಿಂಗ್ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
