Monday, October 27, 2025
Homeರಾಜ್ಯಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಪ್ರಕರಣ ತನಿಖೆ ಚುರುಕು

ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಪ್ರಕರಣ ತನಿಖೆ ಚುರುಕು

Investigation into alleged vote rigging in Aland constituency accelerates

ಬೆಂಗಳೂರು,ಅ.27- ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪ ಕುರಿತ ತನಿಖೆ ವೇಗ ಪಡೆದುಕೊಂಡಿದೆ.ಪ್ರಕರಣದ ಆರೋಪಿಗಳೆಂದು ಗುರುತಿಸಲಾಗಿರುವ ಅಕ್ರಮ್‌, ಅಶ್ಫಾಕ್‌, ನದೀಮ್‌ ಮತ್ತು ಮುಷ್ತಾಕ್‌ ಮತಗಳ್ಳತನ ಕ್ಕೆಂದೇ ಕಾಲ್‌ ಸೆಂಟರ್‌ ಸ್ಥಾಪಿಸಿದ್ದು, ಈ ಸೆಂಟರ್‌ನಲ್ಲಿ ಐದು ಕಂಪ್ಯೂಟರ್‌ ಇರಿಸಿಕೊಂಡು 6,018 ಫಾರ್ಮ್‌ 7 ಅರ್ಜಿಗಳನ್ನು ಸ್ವೀಕರಿಸಿದ್ದರು.

ಈ ನಾಲ್ವರಲ್ಲಿ ಒಬ್ಬ ಆನ್‌ಲೈನ್‌ ರಾಜಕೀಯ ಸರ್ವೇಯರ್‌/ಮ್ಯಾನಿಪ್ಯುಲೇಟರ್‌, ಒಬ್ಬ ಡೇಟಾ ಆಪರೇಟರ್‌ ಮತ್ತು ಮತ್ತಿಬ್ಬರು ಆನ್‌ಲೈನ್‌ ಅರ್ಜಿಗಳನ್ನು ಸಲ್ಲಿಸುವಲ್ಲಿ ಪರಿಣತರಾಗಿದ್ದರು. ಆರೋಪಿಗಳು 6,018 ಅರ್ಜಿಗಳಿಗೆ ಲಾಗಿನ್‌ ಐಡಿಗಳನ್ನು ರಚಿಸಲು ದುರ್ಬಲ ವರ್ಗಗಳ 75 ಮಂದಿ ಮೊಬೈಲ್‌ ಸಂಖ್ಯೆಗಳನ್ನು ಬಳಸಿದ್ದಾರೆಂದು ಎಸ್‌‍ಐಟಿ ಮೂಲಗಳು ಮಾಹಿತಿ ನೀಡಿದೆ.

- Advertisement -

ಒಟಿಪಿ ಮೂಲಕ ಲಾಗಿನ್‌ ಐಡಿ ರಚಿಸಲಾಗಿದೆ. ಆರೋಪಿಗಳು 75 ಮೊಬೈಲ್‌ ಫೋನ್‌ ಸಂಖ್ಯೆಗಳನ್ನು ಹೇಗೆ ಪಡೆದರು? ಮೊಬೈಲ್‌ ಸಂಖ್ಯೆಗಳನ್ನು ಹ್ಯಾಕ್‌ ಮಾಡಿದ್ದರೇ? ಎಂಬುದರ ಕುರಿತು ವಿಚಾರಣೆ ನಡೆಸುತ್ತಿದೆ.ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಈಗಾಗಲೇ ಅಕ್ರಮ್‌, ನದೀಮ್‌ ಹಾಗೂ ಮುಷ್ತಾಕ್‌ನನ್ನು ವಿಚಾರಣೆ ನಡೆಸಿದ್ದು, ಮತ್ತೊಬ್ಬ ಆರೋಪಿಯ ಪತ್ತೆಗೆ ದುಬೈಗೆ ತೆರಳಲು ಸಿದ್ಧತೆ ನಡೆಸಿದೆ.

ಈ ವಂಚನೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಅರ್ಜಿಗಳ ಸಲ್ಲಿಕೆಗೆ ಡೇಟಾ ಆಪರೇಟರ್‌ ಅನ್ನು ಬಳಸಲಾಗಿದೆ. ನಂತರ ಈತ ನಾಲ್ವರ ಸಹಾಯ ಪಡೆದುಕೊಂಡಿದ್ದಾನೆ. ಈ ನಾಲ್ವರು ನಿರುದ್ಯೋಗಿಗಳಾಗಿದ್ದು, 25-30 ವರ್ಷ ವಯಸ್ಸಿನವರಾಗಿದ್ದಾರೆ. ನಾಲ್ವರು ಆರೋಪಿಗಳಿಗೆ ಪ್ರತಿ ಅರ್ಜಿಗೆ 80 ರೂ. ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2023ರ ಚುನಾವಣೆಗೂ ಮುನ್ನ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಅಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌‍ಐಟಿ). ನಾಲ್ವರು ಡೇಟಾ ಸೆಂಟರ್‌ ನಿರ್ವಾಹಕರನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆಗೊಳಪಡಿಸಿತ್ತು.

ಒಂದು ವಾರದ ಹಿಂದೆ ಎಸ್‌‍ಐಟಿ ಅಧಿಕಾರಿಗಳು ಈ ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿ, ಏಳು ಲ್ಯಾಪ್‌ಟಾಪ್‌ಗಳು ಮತ್ತು 15 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿತ್ತು.
ಡೇಟಾ ಸೆಂಟರ್‌ ನಿರ್ವಾಹಕರಿಗೆ ಪ್ರತಿ ಫಾರ್ಮ್‌ 7 ಅರ್ಜಿಗೆ (ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಲು) 80 ರೂ. ಪಾವತಿಸಲಾಗಿದೆ ಎಂಬ ಆರೋಪಗಳ ಕುರಿತು ಎಸ್‌‍ಐಟಿ ತನಿಖೆ ನಡೆಸುತ್ತಿದೆ.

ಡಿಸೆಂಬರ್‌ 2022 ಮತ್ತು ಫೆಬ್ರವರಿ 2023ರ ನಡುವೆ ಒಟ್ಟು 6,018 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಒಟ್ಟು 4.8 ಲಕ್ಷ ರೂ. ಪಾವತಿಯಾಗಿದೆ ಎಂದು ತಿಳಿದುಬಂದಿದೆ.ಆಳಂದ ಶಾಸಕ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ್‌ ಅವರು 2023ರಲ್ಲಿ ದೂರು ನೀಡಿದ ನಂತರ ರಾಜ್ಯ ಪೊಲೀಸರು ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಸೆಪ್ಟೆಂಬರ್‌ನಲ್ಲಿ ಸಿಐಡಿ(ಅಪರಾಧ ತನಿಖಾ ಇಲಾಖೆ) ತನಿಖೆ ವಹಿಸಿಕೊಂಡಿತ್ತು.

ಈ ನಡುವೆ ಎಸ್‌‍ಐಟಿ ತನಿಖೆಯನ್ನು ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಅವರ ನಿವಾಸದ ಬಳಿ ಮತದಾರರ ಸುಟ್ಟ ದಾಖಲೆಗಳ ರಾಶಿ ಪತ್ತೆಯಾಗಿತ್ತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಎಸ್‌‍ಐಟಿ ಅಧಿಕಾರಿಗಳು, ಅರ್ಧ ಸುಟ್ಟ ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಕಲಬುರಗಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.ಇದರ ಬೆನ್ನಲ್ಲೇ ಕಳೆದ ವಾರ, ಆಳಂದದ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಮತ್ತು ಅವರ ಪುತ್ರರಾದ ಹರ್ಷಾನಂದ್‌ ಮತ್ತು ಸಂತೋಷ್‌ ಗುತ್ತೇದಾರ್‌ ಅವರ ಮನೆಗಳ ಮೇಲೆ ಎಸ್‌‍ಐಟಿ ದಾಳಿ ನಡೆಸಿತ್ತು.

ಏತನಧ್ಯೆ ಪ್ರಕರಣದ ತನಿಖೆಗೆ ಎಸ್‌‍ಐಟಿ ಸಿಐಡಿ ಸಹಾಯವನ್ನು ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು, 2023ರ ಫೆಬ್ರವರಿ ತಿಂಗಳಿನಲ್ಲಿ ಮೊಹಮದ್‌ ಅಶ್ಫಾಕ್‌ ಎಂಬಾತನನ್ನು ವಿಚಾರಣೆ ನಡೆಸಿದ್ದರು. ಅಶ್ಫಾಕ್‌ ತನ್ನ ಬಳಿ ಇರುವ ಎಲೆಕ್ಟ್ರಾನಿಕ್‌ ಸಾಧನಗಳನ್ನು ಒಪ್ಪಿಸುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದರೆ ನಂತರ ದುಬೈಗೆ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಅಶ್ಫಾಕ್‌ ತನ್ನ ಸಹಚರರಾದ ಮೊಹಮದ್‌ ಅಕ್ರಂ ಮತ್ತು ಇತರ ಮೂವರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬುದನ್ನು ಎಸ್‌‍ಐಟಿ ಪತ್ತೆ ಮಾಡಿದ್ದು, ಈ ಕುರಿತು ತನಿಖೆ ನಡೆಸಲು ಎಸ್‌‍ಐಟಿ ಸಿಐಡಿ ಸಹಾಯವನ್ನು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ಎಸ್‌‍ಐಟಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳುತಿಳಿಸಿವೆ.

- Advertisement -
RELATED ARTICLES

Latest News