ಬೆಂಗಳೂರು, ಅ.28- ಹಬ್ಬಗಳ ಸರಣಿ ಮುಗಿಯುತ್ತಿದ್ದಂತೆ ಹೂವಿನ ಬೆಲೆ ಕುಸಿತವಾಗಿದ್ದು, ಪುಷ್ಪ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ದಸರಾ, ದೀಪಾವಳಿಗೆ ಉತ್ತಮ ಬೆಲೆ ದೊರೆಯಲಿದೆ ಎಂದು ಭಾರೀ ನೀರಿಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ದೊಡ್ಡ ಆಘಾತ ತಂದಿದೆ. ಹಬ್ಬಗಳ ಸಂದರ್ಭದಲ್ಲಿ ಹೂಗಳ ಬೇಲೆ ಗಗನಕ್ಕೇರುವುದು ಸಾಮಾನ್ಯ. ಆದರೆ, ಈ ಬಾರಿಯ ದಸರಾ, ದೀಪಾವಳಿಯಲ್ಲೂ ಸಹ ಮಾರುಕಟ್ಟೆಯಲ್ಲಿ ಅಷ್ಟೇನು ಬೇಡಿಕೆ ಕಂಡುಬರಲಿಲ್ಲ.
ಹೆಚ್ಚಾಗಿ ಹೂ ಬೆಳೆಯುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ರೈತರು ಹೂ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ನಷ್ಟ ಅನುಭಸುವಂತಾಗಿದೆ. ಗುಣಮಟ್ಟದ ಸೇವಂತಿಗೆ ಮಾರುಕಟ್ಟೆಯಲ್ಲಿ ಕನಿಷ್ಟ ಅಂದ್ರೂ ಕೆಜಿಗೆ 80 ರಿಂದ 100 ರೂ.ಗೆ ಮಾರಾಟವಾದರೆ ದುರ್ಲಭ. ಹೀಗಿರುವಾಗ ಹೂ ಕಟಾವು ಮಾಡಿ, ಮಾರುಕಟ್ಟೆಗೆ ತಂದರೆ ಕೇಳವವವರಿಲ್ಲ. ಇದರಿಂದ ಕೂಲಿ ಸಾಗಾಣಿಕಾ ವೆಚ್ಚ ಕೂಡ ಹುಟ್ಟುತ್ತಿಲ್ಲ ಎಂದು ಬಹುತೇಕ ರೈತರು ಕಟಾವು ಮಾಡದೆ ಗಿಡದಲ್ಲೆ ಬಿಟ್ಟಿದ್ದಾರೆ.
ಹಬ್ಬಕ್ಕೆ ಉತ್ತಮ ಬೆಲೆ ಬರುತ್ತದೆ ಎಂದು ರೈತರು ಹೆಚ್ಚಾಗಿ ಹೂ ಬೆಳೆದಿದ್ದಾರೆ. ಆದರೆ ಅಪಾರ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂ ಬರುತ್ತಿದ್ದು, ಬೇಡಿಕೆ ಇಲ್ಲದ ಕಾರಣ ಬೆಲೆ ಕುಸಿತವಾಗಿದೆ.ಸಾಮಾನ್ಯವಾಗಿ ಸೇವಂತಿಗೆ ಹೂ ಗಿಡವನ್ನು ನಾಟಿ ಮಾಡಿ ಹೂ ಬಿಡಲು ಎರಡೂವರೆಯಿಂದ ಮೂರು ತಿಂಗಳು ಬೇಕು. ಈ ನಡುವೆ ಗೊಬ್ಬರ, ಔಷಧಿ ಸೇರಿ ಒಂದು ಎಕರೆಯಲ್ಲಿ ಸೇವಂತಿಗೆ ಹೂ ಬೆಳೆಯಲು 30 ರಿಂದ 40 ಸಾವಿರ ರೂ. ಖರ್ಚಾಗುತ್ತದೆ. ಆದರೆ ಬೆಲೆ ಕುಸಿತದಿಂದ ಲಾಭವಿರಲಿ, ಹಾಕಿದ ಬಂಡವಾಳ ಬಂದರೆ ಸಾಕು ಎಂದು ಹೂ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಬರೀ ಸೇವಂತಿಗೆ ಹೂವಿನ ಬೆಲೆ ಕುಸಿತವಾಗಿಲ್ಲ. ಚೆಂಡು ಹೂ, ಸುನಾಮಿ ರೋಸ್, ಮಾರಿಗೋಲ್ಡ್, ಸುಗಂಧರಾಜ, ಕಾಕಡ ಹೂವಿನ ಬೆಲೆಯೂ ಕೂಡ ಇಳಿಮುಖವಾಗಿದೆ. ಕಳೆದ ವರ್ಷ ಆಯುಧ ಪೂಜೆ, ದೀಪಾವಳಿ ಹಬ್ಬದಲ್ಲಿ ಉತ್ತಮ ಬೆಲೆಯಿಂದ ತುಸು ಲಾಭಗಳಿಸಿದ್ದ ಬೆಳೆಗಾರರಿಗೆ ಈ ಬಾರಿ ಬೆಲೆ ಕುಸಿತ ನಷ್ಟ ತಂದೊಡ್ಡಿದೆ.
