Wednesday, October 29, 2025
Homeರಾಜ್ಯಶಾಲೆ, ಸರ್ಕಾರಿ ಜಾಗದಲ್ಲಿ ಚಟುವಟಿಕೆಗಳ ನಿರ್ಬಂಧಕ್ಕೆ ಹೈಕೋರ್ಟ್‌ ತಡೆ : ಸರ್ಕಾರಕ್ಕೆ ಮುಖಭಂಗ

ಶಾಲೆ, ಸರ್ಕಾರಿ ಜಾಗದಲ್ಲಿ ಚಟುವಟಿಕೆಗಳ ನಿರ್ಬಂಧಕ್ಕೆ ಹೈಕೋರ್ಟ್‌ ತಡೆ : ಸರ್ಕಾರಕ್ಕೆ ಮುಖಭಂಗ

High Court stays restriction on activities in schools, government premises

ಬೆಂಗಳೂರು,ಅ.28- ಸರ್ಕಾರಿ ಶಾಲಾ-ಕಾಲೇಜುಗಳ ಆಟದ ಮೈದಾನಗಳು ಮತ್ತು ಸರ್ಕಾರಿ ಸಂಸ್ಥೆಗಳ ಆವರಣಗಳಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಬೇಕಾದರೆ ಪೂರ್ವಾನುಮತಿ ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ನ್ಯಾಯಾಲಯದ ಆದೇಶದಿಂದ ಇಡೀ ರಾಜ್ಯದ ಗಮನಸೆಳೆದಿರುವ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದೆ. ನಿಗದಿಯಂತೆ ಅಂದೇ ಪಥಸಂಚಲನ ನಡೆಯಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ಕಳೆದ ಅಕ್ಟೋಬರ್‌ 17ರಂದು ನಡೆದ ಸಚಿವಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂಬ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪತ್ರ ಆಧರಿಸಿ, ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಂಕುಶ ಹಾಕಲು ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು.

- Advertisement -

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್‌ ಪೀಠಕ್ಕೆ ಪುನಶ್ಚೇತನ ಸೇವಾ ಸಂಸ್ಥೆ ಎಂಬ ಖಾಸಗಿ ಸಂಘಟನೆ ಮೇಲನವಿ ಅರ್ಜಿ ಸಲ್ಲಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿತ್ತು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಧಾರವಾಡ ಹೈಕೋರ್ಟ್‌ ಏಕಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಮುಂದಿನ ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಸರ್ಕಾರ ಸಚಿವಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ ರಾಷ್ಟ್ರೀಯ ಸ್ವಯಂ ಸಂಘ(ಆರ್‌ಎಸ್‌‍ಎಸ್‌‍)ದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿದೆ. ಇಡೀ ರಾಜ್ಯದಲ್ಲಿ ಶಾಂತಿಯುತವಾಗಿ ಪಥಸಂಚಲನ ನಡೆದಿದೆ. ಎಲ್ಲೂ ಇಲ್ಲದ ನಿಯಮಗಳನ್ನು ಚಿತ್ತಾಪುರದಲ್ಲಿ ಜಾರಿ ಮಾಡಲಾಗಿದೆ. ಇದರ ಉದ್ದೇಶವೇ ಸಂಘದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು. ಹೀಗಾಗಿ ಸಚಿವ ಸಂಪುಟದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಬಳ್ಳಿ ಆಯುಕ್ತರಿಗೆ ನೋಟಿಸ್‌‍ ಜಾರಿ ಮಾಡಿ ಸರ್ಕಾರಿ ವಕೀಲರಿಗೆ ನಾಳೆ ತಕರಾರು ಅರ್ಜಿ ಸಲ್ಲಿಸಲು ಸೂಚನೆ ನೀಡಿದರು.

ಅನುಮತಿ ಇಲ್ಲದೆ 10 ಜನ ಸೇರಿದರೆ ಅಪರಾಧವೆಂದು ಸರ್ಕಾರದ ಆದೇಶದಲ್ಲಿದೆ. ರಸ್ತೆ, ಪಾರ್ಕ್‌, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪೊಲೀಸ್‌‍ ಕಾಯ್ದೆಯಲ್ಲಿರುವ ಅಧಿಕಾರವನ್ನು ಸರ್ಕಾರ ಆದೇಶದ ಮೂಲಕ ಚಲಾಯಿಸಿದೆ. ಇದು ಸಂವಿಧಾನದ 19(1)ಎ ಬಿ ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳಲಾಗದೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಸರ್ಕಾರಿ ಆದೇಶವು ಸಂವಿಧಾನದ ಕೆಲವು ವಿಧಿಗಳನ್ನು ಉಲ್ಲಂಘನೆ ಮಾಡುತ್ತದೆ. ಪಾರ್ಕ್‌ವೊಂದರಲ್ಲಿ ಹತ್ತು ಜನ ಸೇರಿದರೆ ಅಪರಾಧ ಎಂದು ಪರಿಗಣಿಸಲು ಹೇಗೆ ಸಾಧ್ಯ? ವಾಯುವಿಹಾರಕ್ಕೆ ಬಂದ 10 ಜನ ನಗೆಕೂಟ ನಡೆಸುತ್ತಾರೆ. ಇದನ್ನು ಅಪರಾಧ ಎನ್ನಲು ಸಾಧ್ಯವೇ? ಎಂದು ಸರ್ಕಾರಿ ಪರ ವಕೀಲರನ್ನು ಪ್ರಶ್ನೆ ಮಾಡಿದರು.

ಸಂವಿಧಾನ ನೀಡಿರುವ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾದರೆ ನ್ಯಾಯಾಲಯ ಇದನ್ನು ನೋಡಿಕೊಂಡು ಸುಮನಿರಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾದಾಗ ನಾವು ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಲೇಬೇಕಾಗುತ್ತದೆ. ಸಚಿವ ಸಂಪುಟದ ತೀರ್ಮಾನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವುದಾಗಿ ಆದೇಶದಲ್ಲಿ ಪ್ರಕಟಿಸಿದರು.

ಇದಕ್ಕೂ ಮುನ್ನ ಪುನಶ್ಚೇತನ ಸಂಸ್ಥೆ ಪರ ವಾದ ಮಂಡಿಸಿದ ವಕೀಲ ಅಶೋಕ್‌ ಹಾರನಹಳ್ಳಿ, ಯಾವುದೇ ಪಾರ್ಕ್‌ ಮತ್ತು ಸರ್ಕಾರದ ಆಸ್ತಿಯಲ್ಲಿ ಯಾವುದೇ ಸಂಘಸಂಸ್ಥೆ ಕಾರ್ಯಕ್ರಮ ನಡೆಸುವಂತಿಲ್ಲ. ಇದಕ್ಕೆ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದಿದೆ. ಸರ್ಕಾರದ ಆಸ್ತಿ ಎಂದರೆ ರೋಡ್‌ ಅಂತಾನಾ? 10ಕ್ಕೂ ಹೆಚ್ಚು ಜನರು ಸೇರಿದರೆ ಅದು ತಪ್ಪಾ? ಎಂದು ಕರ್ನಾಟಕ ಪೊಲೀಸ್‌‍ ಕಾಯ್ದೆಯ ಬಗ್ಗೆ ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆ ಇದನ್ನು ನೋಡಬೇಕು, ಸರ್ಕಾರ ಅಲ್ಲ. ಯಾರು ಇದನ್ನು ಆದೇಶ ಮಾಡಿದ್ದು ಎಂದು ನ್ಯಾಯಮೂರ್ತಿಗಳು ಕೇಳಿದಾಗ, ಕ್ಯಾಬಿನೆಟ್‌ ಆದೇಶ ಮಾಡಿದೆ. ಸರ್ಕಾರ ಶಾಲಾ-ಕಾಲೇಜು, ಉದ್ಯಾನ ಮತ್ತು ಇತರ ಕಡೆ ಸಾರ್ವಜನಿಕರು ಬಳಸಲು ಇದೆ. ರಾಜ್ಯದ ಹಲವು ಸಂಸ್ಥೆ ಪ್ರಚಾರ ತರಬೇತಿ ಉದ್ದೇಶದಿಂದ ಸರ್ಕಾರದ ಆಸ್ತಿ ಅನುಮತಿ ಪಡೆಯದೇ ಮಾಡುವುದು ಅಕ್ರಮವೆಂದು ಹೇಳುತ್ತಾರೆ ಎಂದು ವಕೀಲರು ವಾದಿಸಿದರು.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ಗುರಿಯಾಗಿಸಿ ಮಾಡಲು ರೂಪಿಸಲಾಗಿದ್ದು, ಇದು ಸಂವಿಧಾನದ ಮೂಲಭೂತ ಹಕ್ಕುಗಳನ್ನು (ಭಾಷಣ ಸ್ವಾತಂತ್ರ್ಯ, ಸಂಘ ರಚನೆ) ಉಲ್ಲಂಘಿಸುತ್ತದೆ. ರಾಜ್ಯ ಸರ್ಕಾರ ಮತ್ತು ಪೊಲೀಸ್‌‍ ಇಲಾಖೆಯನ್ನು ಪ್ರತಿವಾದಿಯಾಗಿ ಮಾಡಿ ಸಂಸ್ಥೆ ಹೈಕೋರ್ಟ್‌ ಮೇಟ್ಟಿಲೇರಿತ್ತು. ಇದು ಆರ್‌ಎಸ್‌‍ಎಸ್‌‍ ಬ್ಯಾನ್‌ ಚರ್ಚೆಯ ಹಿನ್ನೆಲೆಯಲ್ಲಿದ್ದು, ಖಾಸಗಿ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಆದೇಶವು ರಾಜಕೀಯ ದ್ವೇಷದಿಂದ ಬಂದಿದೆ ಎಂದು ಸಂಸ್ಥೆಯು ಆರೋಪಿಸಿತ್ತು.

ಪ್ರಕರಣದ ಹಿನ್ನೆಲೆ:
ಸಚಿವ ಪ್ರಿಯಾಂಕ್‌ ಖರ್ಗೆ ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸರ್ಕಾರಿ ಆಸ್ತಿಗಳನ್ನು ಬಳಸುವ ಖಾಸಗಿ ಸಂಘಟನೆಗಳಿಗೆ ಮುಂಚಿತವಾಗಿ ಅನುಮತಿ ಕಡ್ಡಾಯಗೊಳಿಸುವ ಆದೇಶ ಹೊರಡಿಸಲಾಯಿತು. ಆದೇಶದಲ್ಲಿ, ಸರ್ಕಾರಿ ಆಸ್ತಿಯನ್ನು (ಭೂಮಿ, ಕಟ್ಟಡ, ಪಾರ್ಕ್‌, ಆಟದ ಮೈದಾನ, ನೀರು ತಡೆಗಳು) ಬಳಸಲು ಸಂಬಂಧಿತ ಅಧಿಕಾರಿಯಿಂದ ಮುಂಚಿತವಾ ಅನುಮತಿ ಪಡೆಯಬೇಕು ಎಂದು ಉಲ್ಲೇಖಿಸಲಾಗಿದೆ. ಕರ್ನಾಟಕ ಪೊಲೀಸ್‌‍ ಕಾಯ್ದೆ 1963ರಡಿ ಅಧಿಕಾರಿಗಳು ನಿಯಂತ್ರಣಕ್ಕೆ ಶಕ್ತಿ ಹೊಂದಿರುವುದಾಗಿ ಹೇಳಲಾಗಿತ್ತು.

- Advertisement -
RELATED ARTICLES

Latest News