ಬೆಂಗಳೂರು,ನ.27- ಕನ್ನಡ ಶಾಲೆಯ ಜೊತೆಯಲ್ಲಿ ನಡೆಯುತ್ತಿರುವ ಉರ್ದು ಶಾಲೆಯನ್ನು ಸ್ಥಳಾಂತರ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು.
ಇಂದು ಬೆಳಗ್ಗೆ ಜನತಾದರ್ಶನಕ್ಕೆ ಆಗಮಿಸಿದ ಶಾಲಾಭಿವೃದ್ಧಿ ಸಮಿತಿಯ ನಾಲ್ವರು ಸದಸ್ಯರು ಲಿಖಿತದೂರು ನೀಡಿದರು. 12 ವರ್ಷಗಳ ಹಿಂದೆ ಮಳೆ ಬಂದು ನೀರು ನುಗ್ಗಿದ ಕಾರಣಕ್ಕೆ ಹರಿಹರದ ಗಂಗಾನಗರದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯನ್ನು ತಳವಾರ ಕೇರಿಯ ಕನ್ನಡ ಶಾಲೆಗೆ ಸ್ಥಳಾಂತರಿಸಲು ಸೂಚಿಸಲಾಗಿತ್ತು.
ಬಡ್ಡಿ ದಂಧೆಗೆ ಕಡಿವಾಣ ಹಾಕಲು ಕ್ರಮ : ಗೃಹ ಸಚಿವ ಪರಮೇಶ್ವರ್
ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೌಖಿಕ ಆದೇಶ ಮೇಲೆ ಶಾಲೆ ಸ್ಥಳಾಂತರಗೊಂಡಿದೆ. ಕನ್ನಡ ಶಾಲೆಯಲ್ಲಿ ಆರು ಕೊಠಡಿಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಆದರೆ ಸ್ಥಳೀಯ ಶಾಸಕರಾದ ಬಿಜೆಪಿಯ ಹರೀಶ್ ಅವರು ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡಲು ಬಿಇಒ ಒತ್ತಡ ಹಾಕಿಸುತ್ತಿದ್ದಾರೆ. ಪಕ್ಕದಲ್ಲೇ ದೇವಸ್ಥಾನವಿದೆ.
ಹಾಗಾಗಿ ಉರ್ದು ಶಾಲೆ ಇಲ್ಲಿರುವುದು ಬೇಡ ಎನ್ನುತ್ತಿದ್ದಾರೆಂದು ಇಸ್ಮಾಯಿಲ್ ಜಬೀವುಲ್ಲಾ ದೂರು ನೀಡಿದರು. ರಾಣೆಬೆನ್ನೂರಿನ ಜೀವಬೆಳಕು ಅಂಧ ಮಕ್ಕಳ ಶಾಲೆಗೆ ಸಿಎ ನಿವೇಶನ ಮಂಜೂರಾಗಿದೆ. 9 ಲಕ್ಷ ರೂ. ಪಾವತಿ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಹಣ ಪಾವತಿ ಮಾಡಲು ಶಾಲೆ ಆಡಳಿತ ಮಂಡಳಿಗೆ ಶಕ್ತಿ ಇಲ್ಲ ವಿನಾಯ್ತಿ ಕೊಡಿ ಎಂದು ಸಿಎಂಗೆ ಮನವಿ ಸಲ್ಲಿಸಲಾಯಿತು. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟರು.
ರಾಮನಗರ ಜಿಲ್ಲೆಯ ರಾಜಮ್ಮ ಎಂಬುವರು ತಮ್ಮ ಜಮೀನನ್ನು ಮೈದುನ ಒತ್ತುವರಿ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿದ್ದ ಬಾವಿಯನ್ನು ಮುಚ್ಚಿದ್ದಾರೆ. ತಮಗೆ ಗಂಡುಮಕ್ಕಳಿಲ್ಲ. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಒತ್ತುವರಿಯಾಗಿರುವ ಜಮೀನನ್ನು ಬಿಡಿಸಿಕೊಡುವಂತೆ ಮನವಿ ಮಾಡಿಕೊಂಡರು. ಆನ್‍ಲೈನ್‍ನಲ್ಲಿ ಹಾಜರಿದ್ದಂಥ ರಾಮನಗರ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ತಕ್ಷಣವೇ ಸ್ಪಂದಿಸುವಂತೆ ಸೂಚನೆ ಕೊಟ್ಟರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಆಧಾರಿತ ಶುಶ್ರೂಕರು ದಿನಗೂಲಿ ಆಧಾರದಲ್ಲಿ ನೀಡುತ್ತಿರುವ ವೇತನವನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಜನತಾದರ್ಶನದಲ್ಲಿ ಬಹುತೇ ಅರ್ಜಿಗಳು ಜಮೀನು ಒತ್ತುವರಿ, ನಿವೇಶನ ಕಬಳಿಕೆಯಂತಹ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿದ್ದವು.